ಶಿಡ್ಲಘಟ್ಟ:ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾದಾಗ ಬಗೆಹರಿಸುವುದರ ಬದಲಿಗೆ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿರ್ಮಲಾ ಅಧಿಕಾರಿಗಳಿಗೆ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಂಗಮಕೋಟೆ ಹೋಬಳಿಯಲ್ಲಿನ ಕುಡಿಯುವ ನೀರು, ರಾಸುಗಳಿಗೆ ಮೇವಿನ ಲಭ್ಯತೆ, ಕೃಷಿ ಚಟುವಟಿಕೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಇದೀಗ ಬಿಸಿಲ ದಿನಗಳು. ಜನರಿಗೆ ನೀರಿನ ಸಮಸ್ಯೆ ಮಾತ್ರ ಎದುರಾಗುವುದಿಲ್ಲ. ಬದಲಿಗೆ ರಾಸುಗಳಿಗೆ ಮೇವಿನ ಕೊರತೆಯೂ ಎದುರಾಗಬಹುದು. ಅದರಿಂದ ಬೇರೆ ಬೇರೆ ರೂಪದ ಸಮಸ್ಯೆಗಳು ಎದುರಾಗಲಿವೆ. ಆದ್ದರಿಂದ ಸಂಬಂಧಿಸಿದ ನೋಡಲ್ ಅಧಿಕಾರಿಗಳು ನೀರು, ರಾಸುಗಳಿಗೆ ಮೇವಿನ ಕೊರತೆಯೂ ಆಗದಂತೆ ಕ್ರಮ ವಹಿಸಬೇಕು. ಜತೆಗೆ ಕೃಷಿ ಚಟುವಟಿಕೆಗಳನ್ನು ಗಮನಿಸಬೇಕು ಎಂದು ಹೇಳಿದರು.
ಎಲ್ಲೋ ಕುಳಿತು ವರದಿ ನೀಡುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಹಾಗಾಗಿ ಸ್ಥಳ ಭೇಟಿ ಪರಿಶೀಲನೆಯಿಂದ ಮಾತ್ರ ಸಮಸ್ಯೆ ವಾಸ್ತವ ಸ್ಥಿತಿ ತಿಳಿಯಲಿದೆಯಲ್ಲದೆ ಅದರ ಪರಿಹಾರವೂ ಸಾಧ್ಯವಾಗಲಿದೆ. ಕಾಲ ಕಾಲಕ್ಕೆ ಸಮಸ್ಯೆ ವರದಿ ಮತ್ತು ಅದರ ಪರಿಹಾರಕ್ಕೆ ಕೈಗೊಂಡ ಕ್ರಮಗಳ ವರದಿಯನ್ನು ನೀಡುವಂತೆ ತಾಕೀತು ಮಾಡಿದರು.
ಜಂಗಮಕೋಟೆ ಹೋಬಳಿಗೆ ನೇಮಕ ಮಾಡಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಸಂಬಂಧಿಸಿದ ಹೋಬಳಿಗೆ ವಾರಕ್ಕೆ ಒಂದು ದಿನ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಿಬೇಕು. ಜತೆಗೆ ತಾವು ಭೇಟಿ ನೀಡಿದ ಪರಿಶೀಲನಾ ಅವಧಿಯಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ತಾಲೂಕಿನ ಟಾಸ್ಕ್ ಫೋರ್ಸ್ ಸಮಿತಿಗೆ ಮಾಹಿತಿಯನ್ನು ನೀಡಿ ಸಮನ್ವಯ ಸಾಧಿಸಿ ಆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದರು.
ಸ್ಥಳಿಯ ಸಂಸ್ಥೆಗಳು ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡಬೇಕು. ಕೊಳವೆಬಾವಿಗಳು ಮತ್ತು ಶುದ್ಧ ಕುಡಿಯುವ ನೀರಿನ ಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು.ನೀರಿನ ಗುಣಮಟ್ಟವನ್ನು ಪರಿಶೀಲನೆ ಮಾಡಿ ಕುಡಿಯುವ ನೀರು ಶುದ್ಧವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದರು.
ರಾಸುಗಳ ಮೇವಿನ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಮೇವಿನ ಕೊರತೆ ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಿ ಅವರ ಸೂಚನೆಯಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ತಾಲೂಕು ಯೋಜನಾಧಿಕಾರಿ ಅನಿಲ್ಕುಮಾರ್, ಜಂಗಮಕೋಟೆ ಹೋಬಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು, ಜಂಗಮಕೋಟೆ ಹೋಬಳಿಯ ನೋಡಲ್ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.