ಮುಖ್ಯಶಿಕ್ಷಕನ ವರ್ತನೆಗೆ ವಿದ್ಯಾರ್ಥಿನಿಯರ ಕಣ್ಣೀರು

 ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಸರ್ಕಾರಿ ಫ್ರೌಢಶಾಲೆ ಮುಖ್ಯಶಿಕ್ಷಕ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಶಾಲೆ ಮುಂಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟಿಸಿದರು.
ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಸರ್ಕಾರಿ ಫ್ರೌಢಶಾಲೆ ಮುಖ್ಯಶಿಕ್ಷಕ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಶಾಲೆ ಮುಂಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತರಗತಿ ಬಹಿಷ್ಕರಿಸಿದ ಮಕ್ಕಳ ಜತೆ ಪಾಲಕರ ಪ್ರತಿಭಟನೆ
  • ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ
  • ತರಗತಿ ಬಹಿಷ್ಕರಿಸಿ ಶಾಲೆ ಮುಂಭಾಗದಲ್ಲಿ ಧರಣಿ
ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿಯ ದೊಡ್ಡಗಂಜೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು, ಪಾಲಕರು ಶಾಲೆ ಮುಂಭಾಗ ಮತ್ತು ಚಿಂತಾಮಣಿ-&ಶ್ರೀನಿವಾಸಪುರ ಹೆದ್ದಾರಿಯಲ್ಲಿ ಮಂಗಳವಾರ ಪ್ರತಿಭಟಿಸಿದರು.
ದೊಡ್ಡಗಂಜೂರು ಶಾಲೆಗೆ ವರ್ಗಾವಣೆ ಯಾದಾಗಿನಿಂದಲೂ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ನ.14ರಂದು ಶಾಲೆಯಲ್ಲಿ ಕರೆದಿದ್ದ ಪಾಲಕರ ಸಭೆಯಲ್ಲಿ ಮುಖ್ಯಶಿಕ್ಷಕರನ್ನು ಪಾಲಕರು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಶಿಕ್ಷಕ ಕ್ಷಮಾಪಣೆ ಕೇಳಿದ್ದರು. ಆ ವಿಡಿಯೋ ವೈರಲ್​ ಆಗಿತ್ತು. ಇದರಿಂದ ಕುಪಿತಗೊಂಡ ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ಸೇಡು ತೀರಿಸಿಕೊಳ್ಳಲು ಗೂಂಡಾ ವರ್ತನೆ ತೋರಿದ್ದ ಎನ್ನಲಾಗಿದ್ದು, ವಿದ್ಯಾರ್ಥಿನಿಯರು ಪಾಲಕರ ಗಮನಕ್ಕೆ ತಂದಿದ್ದಾರೆ. ಮಂಗಳವಾರ ಬೆಳಗ್ಗೆ ಶಾಲೆ ಬಳಿ ಧಾವಿಸಿದ ಪಾಲಕರ ಜತೆ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಶಾಲೆ ಮುಂಭಾಗದಲ್ಲಿ ಧರಣಿ ನಡೆಸಿದರು.
ಪ್ರೌಢಶಾಲೆ ವಸತಿ ನಿಲಯದಲ್ಲಿ 10ನೇ ತರಗತಿಯ 50 ವಿದ್ಯಾರ್ಥಿನಿಯರಿದ್ದಾರೆ. ಆರೋಪಿತ ಮುಖ್ಯಶಿಕ್ಷಕ ಈ ಹಿಂದೆ ಚಿಂತಾಮಣಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲೂ ಇದೇ ರೀತಿ ಅಸಭ್ಯ ವರ್ತನೆ ತೋರಿದ್ದರು ಎನ್ನಲಾಗಿದೆ.
ದೈಹಿಕ ಕಿರುಕುಳ ಆರೋಪ: ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು.ಮುಖ್ಯಶಿಕ್ಷಕನ ವರ್ತನೆ ಮತ್ತು ಅಸಭ್ಯ ಮಾತು, ಮಾನಸಿಕ ಮತ್ತು ದೈಹಿಕ ಕಿರುಕುಳದ ಬಗ್ಗೆ ವಿವರಿಸಿ ಬಹುತೇಕ ಎಲ್ಲ ವಿದ್ಯಾರ್ಥಿನಿಯರು ಕಣ್ಣೀರಿಟ್ಟರು. ವರ್ಗಾವಣೆ ಮಾಡುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಪಾಲಕರು ಎಚ್ಚರಿಕೆ ನೀಡಿದರು.
ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಲಿ ಎಂದು ಚಿಂತಾಮಣಿ-&ಶ್ರೀನಿವಾಸಪುರ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಲು ಮುಂದಾದರು. ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆಗೆ ಅವಕಾಶ ಕಲ್ಪಿಸಲಿಲ್ಲ. ಪಾಲಕರಾದ ಚೌಡರೆಡ್ಡಿ, ಪ್ರಭಾವತಿ, ಗಂಗಾಧರಪ್ಪ, ಸುಜಾತಾ, ಶ್ರೀನಾಥ್​, ಬೈರಮ್ಮ, ಶೋಭಾ, ಪವಿತ್ರಾ, ಅಶ್ವಿನಿ, ಶಾಂತಮ್ಮ, ರವಿ, ದೇವರಾಜ್​, ಗೋಕುಲ್​, ವೆಂಕಟ್​ ಶಿವ, ಕೃಷಿಕ ಸಮಾಜದ ಅಧ್ಯಕ್ಷ ಜಯರಾಮರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net