ಬಾಗೇಪಲ್ಲಿ: ದೇಶಕ್ಕೆ ಸಂವಿಧಾನ ರಚಿಸಿಕೊಟ್ಟಿರುವ ಮಹನೀಯರ ಜಯಂತಿಗೆ ನೀಡಿರುವ ಅನುಮತಿ ರದ್ದುಪಡಿಸಿ ಸಮಾಜ ಸೇವೆಗೆ ತೊಂದರೆ ನೀಡುವ ನೀಚ ರಾಜಕೀಯ ಬಿಟ್ಟು ಕ್ಷೇತ್ರದ ಅಭಿವೃಧ್ಧಿ ಕಡೆ ಗಮಹರಿಸಿ, ಇಲ್ಲವೇ ಟ್ರಸ್ಟ್ನಿಂದ ಆಯೋಜಿಸಿರುವ ಅಂಬೇಡ್ಕರ್ ಜಯಂತಿ ತಡೆದು ನೋಡಿ ಎಂದು ಎನ್ಡಿಎ ಮುಖಂಡ ಹರಿನಾಥರೆಡ್ಡಿ ಶಾಸಕ ಸುಬ್ಬಾರೆಡ್ಡಿಗೆ ಸವಾಲು ಹಾಕಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್, ದಲಿತ ಮುಖಂಡರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ಸೂಚನೆಯಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಂಬೇಡ್ಕರ್, ಬಾಬೂಜಿ ಜಯಂತಿ ಆಚರಣೆ ಜತೆಗೆ ಪ್ರತಿಭಾ ಪುರಸ್ಕಾರ, ಉಚಿತ ಹೆಲ್ಮೆಟ್ ವಿತರಣೆಗೆ ಅನುಮತಿ ಪಡೆದು ಬಾಗೇಪಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಟ್ರಸ್ಟ್ಯಿಂದ ಸಿದ್ಧತೆ ಮಾಡಲಾಗುತ್ತಿದೆ. ಶಾಸಕ ಸುಬ್ಬಾರೆಡ್ಡಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾರ್ಯಕ್ರಮಕ್ಕೆ ನೀಡಿರುವ ಅನುಮತಿ ರದ್ದು ಮಾಡಿಸಿದ್ದಾರೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಪ್ರಶ್ನಿಸಿದಾಗ ಶಾಸಕರ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಾರೆ. ಕ್ಷೇತ್ರದಲ್ಲಿ ಯಾರು ಸಮಾಜ ಸೇವೆ, ಮಹನೀಯರ ಜಯಂತಿಗೆ ಅಡ್ಡಿ, ದಲಿತ ಮುಖಂಡರ ಬಗ್ಗೆ ಹಗುರವಾದ ಮಾತು, ಇದನ್ನು ವಿರೋಧಿಸಿದರೆ ರೌಡಿ ಶೀಟರ್ ಮಾಡಿಸಿ ಪೊಲೀಸರಿಂದ ಧಮ್ಕಿ ಹಾಕಿಸಿ ರಾಜಕೀಯವಾಗಿ ತುಳಿಯುತ್ತಿರಿ. ಇದೇನಾ ನಿಮ್ಮ ಅಭಿವೃದ್ಧಿ ಕೆಲಸ. ಕ್ಷೇತ್ರ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನು ನಿಮ್ಮ ಮಗ ಸೂಚಿಸಿದವರಿಗೆ ಗುತ್ತಿಗೆ ಕೊಡಬೇಕು. ಟಾರ್ ಪ್ಲಾಂಟ್ ನಿಮ್ಮದೆ ಇರಬೇಕು, ರೈತರ ಜಮೀನುಗಳು ನಿಮಗೆ ಮಾರಾಟ ಬೇಕು, ಸರ್ಕಾರಿ ಜಮೀನುಗಳು ನಿಮಗೆ ಬಿಟ್ಟುಕೊಡಬೇಕು ಇದಕ್ಕೇನಾ ಜನ ನಿಮ್ಮನ್ನು ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿರುವುದು ? ಎಂದು ಪ್ರಶ್ನಿಸಿದರು.
ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ನಿಂದ ಆಯೋಜಿಸುವ ಸಮಾಜ ಸೇವಾ ಕಾರ್ಯಕ್ರಮಗಳಿಗೆ ತೊಂದರೆ ಕೊಟ್ಟು ಅಡ್ಡಿಪಡಿಸಿದರೆ ಸುಮ್ಮನೇ ಇರುವವನಲ್ಲ, ನಾನು ಇದೇ ಕ್ಷೇತ್ರದವನೇ, ನನಗೂ ಕ್ಷೇತ್ರದಲ್ಲಿ ನಿಮಗಿಂತ ಹೆಚ್ಚು ಸಂಬಂಧಿಕರು, ಬಂಧು&ಬಳಗ ಇದೆ. ನಿಮಗೆ ತಾಕತ್ತಿದ್ದರೆ ಏ.14 ರಂದು ಟ್ರಸ್ಟ್ಯಿಂದ ಆಯೋಜಿಸಿರುವ ಅಂಬೇಡ್ಕರ್, ಡಾ.ಜಗಜೀವನರಾಮ್ ಜಯಂತಿ ನಿಲ್ಲಿಸಿ ನೋಡೋಣ ಎಂದು ಶಾಸಕ ಸುಬ್ಬಾರೆಡ್ಡಿಗೆ ಹರಿನಾಥರೆಡ್ಡಿ ಸವಾಲು ಹಾಕಿದ್ದಾರೆ.
ಮಾದಾರ ಮಹಾ ಸಂಘದ ಅಧ್ಯಕ್ಷ ಆ.ನ.ಮೂರ್ತಿ ಮಾತನಾಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ ಏ.8ರಂದು ಅಂಬೇಡ್ಕರ ಜಯಂತಿ ಆಚರಣೆಗೆ ಅನುಮತಿಕೊಟ್ಟು ಕಾರಣ ನೀಡದೆ ಜಯಂತಿ ಆಚರಣೆಗೆ ನೀಡಿರುವ ಅನುಮತಿಯನ್ನು ಏ.9 ರಂದು ರದ್ದುಪಡಿಸಿದ್ದಾರೆ. ಇದಕ್ಕೆ ಮೂಲ ಕಾರಣ ದಲಿತರನ್ನು ಉದ್ದಾರ ಮಾಡುತ್ತೇನೆಂದು ದಲಿತರ ಮತಗಳಿಂದ ಶಾಸಕರಾಗಿ ದಲಿತರನ್ನು ತುಳಿಯುತ್ತಿರುವ ಶಾಸಕ ಸುಬ್ಬಾರೆಡ್ಡಿ ಒತ್ತಡವೇ ಕಾರಣ ಎನ್ನುವುದಕ್ಕೆ ನಮ್ಮ ಬಳಿ ದಾಖಲೆ ಇವೆ, ಅಂಬೇಡ್ಕರ್ ಹಾಗೂ ಡಾ.ಬಾಬು ಜಗನ ಜೀವನರಾಮ್ ಆಚರಣೆ ಅನುಮತಿ ರದ್ದುಗೆ ನಾನು ಕಾರಣ ಅಲ್ಲ ಎಂದು ಶಾಸಕರು ಸಾಬೀತುಪಡಿಸಿಕೊಳ್ಳಬೇಕು ಎಂದರು.