ಪ್ರತಿಷ್ಠಿತ ಆಭರಣ ಅಂಗಡಿಯಲ್ಲಿ ಕೋಟ್ಯಂತರ ಮೌಲ್ಯದ ಬೆಳ್ಳಿ ಕಳ್ಳತನ

ಕಳ್ಳತನವಾಗಿರುವ ಚಿಕ್ಕಬಳ್ಳಾಪುರ ನಗರದಲ್ಲಿನ ಎಯು ಜ್ಯುವೆಲ್ಲರ್ಸ್ ಅಂಗಡಿ.‌
ಕಳ್ಳತನವಾಗಿರುವ ಚಿಕ್ಕಬಳ್ಳಾಪುರ ನಗರದಲ್ಲಿನ ಎಯು ಜ್ಯುವೆಲ್ಲರ್ಸ್ ಅಂಗಡಿ.‌
Published on
ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿ ಆಭರಣಗಳ ಬೆಲೆ‌ ದಿನೇದಿನೇ ಗಗನಕ್ಕೇರುತ್ತಿದೆ.‌ ದುಬಾರಿ ದರವನ್ನು ಕೇಳಿ ಗ್ರಾಹಕರು ಅಬ್ಬಾ ಎನ್ನುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಳ್ಳರು ಚಿನ್ನಾಭರಣ ಅಂಗಡಿಯಲ್ಲಿನ ಕೋಟ್ಯಂತರ ರೂ ಮೌಲ್ಯದ 140 ಕೆ‌.ಜಿ.ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯಲ್ಲಿರುವ ಎಯು ಜ್ಯುವೆಲ್ಸರ್ ಅಂಗಡಿಯಲ್ಲಿಯೇ ಕಳ್ಳತನವಾಗಿರುವುದು. ಎಂದಿನಂತೆ ಅಂಗಡಿ ಮಾಲೀಕರು ಸಿಬ್ಬಂದಿಯೊಂದಿಗೆ ಬಾಗಿಲು ತೆಗೆಯಲು ಬಂದಾಗ ಮಾಹಿತಿ ಗೊತ್ತಾಗಿದೆ. ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ, ತಪಾಸಣೆ ನಡೆಸಲಾಯಿತು.
*ಬಂಗಾರದ ರಕ್ಷಣೆ*
ಅಂಗಡಿಯಲ್ಲಿನ ಷೋಕೇಸ್ ನಲ್ಲಿಟ್ಟಿದ್ದ 3 ಕೋಟಿ ರೂ ಮೌಲ್ಯದ ಬೆಳ್ಳಿ ವಸ್ತುಗಳು ಕಳವಾಗಿವೆ. ಆದರೆ, ಬಂಗಾರದ ಒಡವೆಗಳನ್ನು ಲಾಕರ್ ನಲ್ಲಿಟ್ಟಿದ್ದ ಹಿನ್ನೆಲೆಯಲ್ಲಿ ಕಳ್ಳತನವಾಗಿಲ್ಲ. ಹೆಚ್ಚಿಗೆ ದುಬಾರಿ ಚಿನ್ನವನ್ನು ಖರೀದಿಸಲಾಗದೇ ಇತ್ತೀಚೆಗೆ ಗ್ರಾಹಕರು ಪ್ರತಿದಿನ ದೀಪ, ತಟ್ಟೆ, ಗೆಜ್ಜೆ, ದೇವರ ಮುಖವಾಡ ಸೇರಿದಂತೆ ಇತರೆ ಆಭರಣಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರಿಂದ ಬೆಳ್ಳಿ ಆಭರಣಗಳನ್ನು ಪ್ರದರ್ಶನಕ್ಕೆ ಅಂಗಡಿಯೊಳಗಿನ ಶೋಕೇಸ್ ನಲ್ಲಿಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
*ಡಿವಿಆರ್ ನೊಂದಿಗೆ ಪರಾರಿ*
ಮುಂಜಾಗ್ರತಾ ದೃಷ್ಟಿಯಿಂದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ಕಳ್ಳರು ಬೆಳ್ಳಿ ವಸ್ತುಗಳ ಜತೆಗೆ ಸಿಸಿ ಕ್ಯಾಮರಾ ದತ್ತಾಂಶ ಸಂಗ್ರಹದ ಡಿವಿಆರ್ ಅನ್ನು ಕದ್ದು ಪರಾರಿಯಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಹೃದಯಭಾಗದಲ್ಲಿನ ಪ್ರಮುಖ ರಸ್ತೆ ಮುಂಭಾಗದಲ್ಲಿ ಅಂಗಡಿ ಇದ್ದು ತಡರಾತ್ರಿ ಕಳ್ಳರು ಕೈ ಚಳಕ ತೋರಿಸಿರುವ ಶಂಕೆ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net