ತಾಲೂಕಿನ ಹೆಗ್ಗೋಠಾರ ಗ್ರಾಮದ ಪುಟ್ಟಮಲ್ಲಪ್ಪ ಅವರ ನೈಸರ್ಗಿಕ ವಿಧಾನದ ಬೇಸಾಯಕ್ಕೆ ಪ್ರಕೃತಿಯೇ ಸಂಪನ್ಮೂಲ. ಇಕ್ರಾ ಸಂಸ್ಥೆಯ ಕಾರ್ಯಕರ್ತರ ಶಿವಲಿಂಗೇಗೌಡ ಅವರ ಮಾರ್ಗದರ್ಶನದಲ್ಲಿ 2004ರಿಂದ ಸಾವಯವ ಕೃಷಿ ಮಾಡುತ್ತಿರುವ ರೈತ ಪ್ರಸ್ತುತ 3.5 ಎಕರೆಯಲ್ಲಿ ಟಮೊಟೊ, ಅರಿಶಿಣ, ಬಾಳೆ(ಏಲಕ್ಕಿ) ಬೆಳೆದಿದ್ದಾರೆ. ಜತೆಗೆ 150 ತೆಂಗಿನ ಸಸಿಗಳು, 7 ಮಾವು, ಕರಿಬೇವು, ಮೇವಿನ ಬೆಳೆ ಹಾಕಿದ್ದಾರೆ. ಉಳುಮೆ ಮಾಡಲು ಎತ್ತುಗಳು, 6 ಹಸುಗಳಿದ್ದು, ಡೇರಿಗೆ ಹಾಲು ಹಾಕಿ ಹೈನೋದ್ಯಮವನ್ನೂ ಮಾಡುತ್ತಿದ್ದಾರೆ. ಇವರ ಕೃಷಿಗೆ ಬೇಕಾದ ಗೊಬ್ಬರ ಮತ್ತು ಇತರೆ ಸಂಪನ್ಮೂಲಗಳನ್ನು ಹಣ ಕೊಟ್ಟು ಹೊರಗಿನಿಂದ ತರುವುದಿಲ್ಲ. ಬದಲಿಗೆ ಜೀವಾಮೃತ ತಯಾರಿಸಿಕೊಂಡು ಬೆಳೆಗಳಿಗೆ ನೀಡುತ್ತಿದ್ದಾರೆ. ಸೊಪ್ಪು, ತರಕಾರಿ, ಹಣ್ಣುಗಳನ್ನು ಕೊಳೆಸಿ ಇದರಿಂದ ಉತ್ಪಾದನೆಯಾಗುವ ದ್ರಾವಣವನ್ನು ಭೂಮಿಗೆ ಬಿಡುತ್ತಿದ್ದಾರೆ. ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಇದರಿಂದ ಕೃಷಿ ಬಂಡವಾಳವೂ ಅಧಿಕವಾಗುತ್ತಿದೆ. ಲಾಭ ಕಡಿಮೆಯಾಗಿ ನಷ್ಟ ಉಂಟಾಗುತ್ತಿದೆ. ರೈತ ಪುಟ್ಟಮಲ್ಲಪ್ಪ ಸ್ಥಳೀಯವಾಗಿ ಸಂಪನ್ಮೂಲ ಬಳಕೆ ಮಾಡಿಕೊಂಡು ಸಾವಯವ ಬೇಸಾಯ ಮಾಡುತ್ತಿರುವುದರಿಂದ ಕಡಿಮೆ ಬಂಡವಾಳ, ಅಧಿಕ ಲಾಭ ಪಡೆಯುತ್ತಿದ್ದಾರೆ.