

ಗೌರಿಬಿದನೂರು:ಕಾನೂನಿನ ಅರಿವಿದ್ದರೇ ವಿದ್ಯಾರ್ಥಿಗಳ ರಕ್ಷಣೆ ಹಾಗೂ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯ ಎಂದು ನಗರ ಠಾಣೆ ಉಪನಿರೀಕ್ಷಕಿ ವರಲಕ್ಷ್ಮೀ ತಿಳಿಸಿದರು.
ನಗರದ ಲೀಡರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಜನತೆಗೆ ಕಾನೂನಿನ ಜ್ಞಾನ ಅಗತ್ಯ. ಹೆಣ್ಣು ಮಕ್ಕಳಿಗೆ ಪಾಲಕರು ಬಾಲ್ಯವಿವಾಹಕ್ಕೆ ಬಲವಂತ ಮಾಡಿದರೇ 1098, 112 ಗೆ ಕರೆ ಮಾಡಿ ದೂರು ನೀಡಬಹುದು. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೋಕೋ ಕಾಯ್ದೆ, ಬಾಲಕರ ಹಕ್ಕುಗಳ ರಕ್ಷಣೆಗೆ ಜೆಜೆ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಮಾದಕ ವಸ್ತುಗಳ ಸೇವನೆ ಮಾಡದಿರಿ.
ವರದಕ್ಷಿಣೆ ನಿಷೇಧ ಕಾಯ್ದೆಯಡಿ ವರದಕ್ಷಿಣೆ ಕೇಳುವುದು ಹಾಗೂ ಕೊಡುವುದು ಅಪರಾಧ. ಡಿಜಿಟಲ್ ಯುಗದಲ್ಲಿ ಸೈಬರ್ ಫ್ರಾಡ್ ಹೆಚ್ಚಾಗಿದ್ದು, ಅಪರಿಚಿತ ಲಿಂಕ್ ಕ್ಲಿಕ್ ಮಾಡಬಾರದು. ತುರ್ತು ಸಂದರ್ಭದಲ್ಲಿ 1098 ಮಕ್ಕಳ ಸಹಾಯವಾಣಿ, 112 ತುರ್ತು ಸೇವೆ, 1930 ಸೈಬರ್ ಕೆಂ, 1933 ಮಾದಕ ವಸ್ತುಗಳ ವಿರುದ್ಧ ದೂರು ನೀಡಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಮಧುಕರ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಜಾಗೃತಿ ಮೂಡಿಸುತ್ತದೆ. ಪಠ್ಯಪುಸ್ತಕ ಓದಿದರೆ ಸಾಲದು, ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದು ಮನೆ, ಸಮಾಜಕ್ಕೂ ತಿಳಿಸಬೇಕು. ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಲ್.ಶಿವರಾಮ ರೆಡ್ಡಿ ಇದ್ದರು.