ಪ್ರೇಮ ವಿವಾಹಕ್ಕೆ ಪಾಲಕರ ಕಿರುಕುಳ, ಪೊಲೀಸರಿಂದ ಪ್ರಕರಣ ಸುಖಾಂತ್ಯ

ಪ್ರೇಮಿಗಳು ಸಿಹಿ ತಿನ್ನಿಸಿಕೊಂಡು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾದರು
ಪ್ರೇಮಿಗಳು ಸಿಹಿ ತಿನ್ನಿಸಿಕೊಂಡು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾದರು
Published on

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರ ಬೆದರಿಕೆ, ಕಿರುಕುಳಕ್ಕೊಳಗಾಗಿದ್ದ ಪ್ರೇಮಿಗಳಿಗೆ ಪೊಲೀಸರು ರಕ್ಷಣೆ ನೀಡಿ, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಚಿಂತಾಮಣಿ ತಾಲೂಕಿನ ಐ ಕುರಪ್ಪಲ್ಲಿ ರಕ್ಷಿತಾ ಮತ್ತು ಕೊಂಡವೆನಕಪಲ್ಲಿ ಯಶವಂತ್ ಮದುವೆಯಾದವರು. ಇಬ್ಬರು ಹತ್ತಿರದ ದಾಯಾದಿ ಸಂಬಂಧಿಗಳು. ವರಸೆಯಲ್ಲಿ ಯಶವಂತ್‌ ಗೆ ರಕ್ಷಿತಾ ಅಕ್ಕನ ಮಗಳು. ಆದರೂ, ಯುವತಿಯ ಸೋದರ ಮಾವಂದಿರು ಈ ಇವರಿಬ್ಬರ ಪ್ರೀತಿ ಪ್ರೇಮ, ಮದುವೆಗೆ ವಿರೋಧಿಸುತ್ತಿದ್ದರು. ಇದರಿಂದ ಜೋಡಿಗಳು ಮದುವೆಯಾಗಿ ಬಂದು ಪೊಲೀಸರ ರಕ್ಷಣೆ ಪಡೆದಿದ್ದರು.

*ಬೆದರಿಕೆಯ ಆರೋಪ*
ರಕ್ಷಿತಾಳ ತಾಯಿಯ ತವರೂರು ಆದ ಕೋಲಾರ ತಾಲ್ಲೂಕಿನ ಜಂಭಾಪುರ ಗ್ರಾಮದಲ್ಲಿರುವ ಅಜ್ಜಿ ತಾತನ ಮನೆಯಲ್ಲಿ ಬೆಳೆದಿದ್ದು ಹತ್ತಿರ ಸಂಬಂಧಿ ಯಶವಂತ್‌ನನ್ನು ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದರ ನಡುವೆ ಇಬ್ಬರು ಹನುಮ ಜಯಂತಿಯ ದಿನದಂದು ಚಿಂತಾಮಣಿ ನಗರದ ವರದಾದ್ರಿ ಬೆಟ್ಟಕ್ಕೆ ಹೋಗಿದ್ದರ ಬಗ್ಗೆ ಮಾಹಿತಿ ತಿಳಿದ ರಕ್ಷಿತಾ ಸೋದರ ಮಾವಂದಿರು ಬೈದು ಹೊಡೆದಿದ್ದು ಯುವತಿಗೆ ಇಷ್ಟವಿಲ್ಲದಿದ್ದರೂ ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿಶ್ವಿಯಿಸಿದ್ದರು. ಆದರೆ, ರಕ್ಷಿತಾ ಪ್ರಿಯಕರನೊಂದಿಗೆ ಹೋಗಿ ಮದುವೆಯಾಗಿದ್ದಾರೆ.

*ಸರ್ವರ್‌ ಸಮಸ್ಯೆ*
ಬೇರೆ ಕಡೆ ಮದುವೆಯಾಗಿ ಬಂದ ರಕ್ಷಿತಾ ಮತ್ತು ಯಶವಂತ್ ಚಿಂತಾಮಣಿ ನೋಂದಣಿ ಕಚೇರಿಗೆ ರಿಜಿಸ್ಟರ್‌ ಮಾಡಿಸಲು ಬಂದಿದ್ದರು. ಆದರೆ, ಸರ್ವರ್‌ ಸಮಸ್ಯೆಯಿಂದ ಸಾಧ್ಯವಾಗಿಲ್ಲ. ಇದರ ನಡುವೆ ದೂರಿನ ಹಿನ್ನೆಲೆಯಲ್ಲಿ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸರು ಅಗತ್ಯ ದಾಖಲೆಗಳೊಂದಿಗೆ ದೃಢೀಕರಣ, ಪರಸ್ಪರ ಲಿಖಿತ ಅಭಿಪ್ರಾಯವನ್ನು ಪಡೆದುಕೊಂಡು ಮದುವೆ ಮಾಡಿಸಿದ್ದಾರೆ. ಇನ್ನೂ ಯುವತಿಯ ಸಂಬಂಧಿಕರು ಕಾರಿನಲ್ಲಿ ರಕ್ಷಿತಾಳನ್ನು ಅಪಹರಿಸಲು ಯತ್ನಿಸಿ, ಬೆದರಿಕೆಯನ್ನೊಡ್ಡಿರುವ ಆರೋಪ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net