

ಚಿಕ್ಕಬಳ್ಳಾಪುರ: ತನ್ನ ರಾಜಕೀಯ ಗುರುವಾಗಿರುವ ಚಿಂತಾಮಣಿ ಶಾಸಕ ಡಾ ಎಂ.ಸಿ.ಸುಧಾಕರ್ ವಿರುದ್ಧವೇ ಶಾಸಕ ಪ್ರದೀಪ್ ಈಶ್ವರ್ ( MLA Pradeep Eshwar ) ಟ್ವೀಟ್ ವಾರ್ ಮುಂದುವರೆಸಿದ್ದಾರೆ.
ನನ್ನ ಬಗ್ಗೆ ಮಾತಾಡೋದು ಸುಲಭ, ನನ್ನ ಸ್ಥಾನಕ್ಕೆ ಬರೋದು ಕಷ್ಟ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಆರಂಭಿಸಿರುವ ಪ್ರದೀಪ್ ಈಶ್ವರ್, ಚಿಂತಾಮಣಿಯ ದಲಿತ ಬಾಂಧವರಿಗೆ ನಮಸ್ಕಾರ, ಉಯ್ಯಲವಾಡಿ ದೇವಸ್ಥಾನಕ್ಕೆ ದಲಿತರಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಿಷೇಧ ಹೇರಲಾಗಿತ್ತು. ನಾನು ಬರೆದ ಪತ್ರಕ್ಕೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರು ಸ್ಪಂದಿಸಿದ್ದಾರೆ. ಅವರಿಬ್ಬರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿದ್ದೇನೆ ಹೊರತು ಚಿಂತಾಮಣಿಯ ಯಾವುದೇ ಪ್ರಭಾವಿ ರಾಜಕಾರಣಿಯ ಒತ್ತಡದಿಂದಲ್ಲ. ಕಂಬಾಲಹಳ್ಳಿಯಲ್ಲಿ 7 ಮಂದಿ ದಲಿತರನ್ನು ಸಜೀವವಾಗಿ ದಹನ ಮಾಡಲು ಪ್ರತ್ಯಕ್ಷವಾಗಿಯೋ ಹಾಗೂ ಪರೋಕ್ಷವಾಗಿಯೋ ಕಾರಣವಾಗಿದ್ದ ಕುಟುಂಬದ ಕುಡಿಯ ಹೆದರಿಕೆಗೆ ನಾನು ಜಗ್ಗುವ ವ್ಯಕ್ತಿಯಲ್ಲ. ಆ ಪ್ರಭಾವಿ ರಾಜಕಾರಣಿಗೆ ಹೇಳುತ್ತಿದ್ದೇನೆ ನಾನೊಬ್ಬ ಸೆಲ್ಫ್ ಮೇಡ್ ಮ್ಯಾನ್ (Self made Man). ನಿಮ್ಮ ವಿಕೃತ ಮನಸ್ಸಿನ ರಾಜಕಾರಣಕ್ಕೆ ಹೆದರುವ ವ್ಯಕ್ಕಿ ನಾನಲ್ಲ. ನಿಮ್ಮೊಂದಿಗೆ ಹೇಗೆ ಫೈಟ್ ಮಾಡಬೇಕೆಂದು ನನಗೆ ಸ್ಪಷ್ಟವಾಗಿ ಅರ್ಥವಾಗಿದೆ. ಫೈಟ್ ಮಾಡೋಣ (Let’s Fight) ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.
ಅಂದಹಾಗೆ, ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಎಂ.ಸಿ.ಸುಧಾಕರ್ ನನ್ನ ರಾಜಕೀಯ ಗುರು ಎಂದು ಪ್ರದೀಪ್ ಈಶ್ವರ್ ಹೇಳುತ್ತಿದ್ದರು. ಆದರೆ, ಇತ್ತೀಚೆಗೆ ಚಿಕ್ಕಬಳ್ಳಾಪುರ ಸ್ವಕ್ಷೇತ್ರದಲ್ಲಿ ಪ್ರದೀಶ್ ಈಶ್ವರ್ ಹಸ್ತಕ್ಷೇಪ ಹಾಗೂ ನಿಯಂತ್ರಣದ ಬಗ್ಗೆ ಆರೋಪ ಕೇಳಿಬಂದಿದೆ.
ಇದರಿಂದ ಸ್ವಪಕ್ಷೀಯ ಬಂಡಾಯ ಮುಖಂಡರೊಂದಿಗೆ ಪಕ್ಷದ ವರಿಷ್ಠರಿಗೆ ಶಾಸಕ ಎಂ.ಸಿ.ಸುಧಾಕರ್ ದೂರು ನೀಡಿದ್ದು, ಇದರಿಂದ ಆಕ್ರೋಶಗೊಂಡ ಪ್ರದೀಪ್ ಈಶ್ವರ್ ದಲಿತಾಸ್ತ್ರ ಪ್ರಯೋಗಿಸಿದ್ದಾರೆ. ಚಿಂತಾಮಣಿಯಲ್ಲಿ ಅಸ್ಪೃಶ್ಯತೆ, ದಲಿತರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ವಿಚಾರವನ್ನಿಟ್ಟಿಕೊಂಡು ಹೋರಾಟಕ್ಕೆ ಕರೆ ನೀಡಿದ್ದಾರೆ. ಈಗ ಚಿಂತಾಮಣಿ ತಾಲೂಕಿನ ಕಂಬಾಲಪಲ್ಲಿಯಲ್ಲಿನ ದಲಿತರ ಸಜೀವ ದಹನ ವಿಚಾರವನ್ನೂ ಮುನ್ನೆಲೆಗೆ ತಂದಿದ್ದಾರೆ.