ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 1000 ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಮಗಳ ಫಲವಾಗಿ ಹತ್ತು ಹಲವು ಕ್ರಾಂತಿಕಾರಕ ಸುಧಾರಣೆಗಳಾಗಿದ್ದು, ಅದರ ಪ್ರತಿಫಲವೇ ರಾಜ್ಯದಲ್ಲಿ ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ,ಜನರಿಗೆ ನೆಮ್ಮದಿ ಸಿಕ್ಕಿದೆ. ರಾಜ್ಯದಲ್ಲಿ ಪ್ರಸ್ತುತದ ಸರ್ಕಾರ ಅಧಿಕಾರ ವಹಿಸಿಕೊಂಡಾಗ 49 ಲಕ್ಷ ಜಮೀನಿನ ಖಾತೆಗಳು ಮೃತಪಟ್ಟವರ ಹೆಸರಿನಲ್ಲಿದ್ದವು. ಇವರ ಹೆಸರಿನಲ್ಲೇ ಪಹಣಿಗಳು ಮುಂದುವರೆದು ಅವರ ವಾರಸುದಾರರಿಗೆ ಫೌತಿ ಖಾತೆ ಮೂಲಕ ವರ್ಗಾವಣೆಯಾಗದೇ ಉಳಿದು ಬಿಟ್ಟಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಕಳೆದ 1000 ದಿನಗಳಲ್ಲಿ 18,50,000 ಫೌತಿ ಖಾತೆಗಳನ್ನು ಮಾಡಿ ರೈತರ ಮನೆ ಬಾಗಿಲಿಗೇ ತಲುಪಿಸಲಾಗಿದೆ ಎಂದು ತಿಳಿಸಿದ್ದಾರೆ.