ಬಲವಂತವಾಗಿ ಭೂಮಿ ಕಿತ್ತುಕೊಳ್ಳುವುದು ಅಪರಾಧ

ಶಿಡ್ಲಟ್ಟಕ್ಕೆ ಬರ ಪರಿಸ್ಥಿತಿ ವೀಸಲು ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಕೆಐಎಡಿಬಿ ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಮುಖಂಡರು ಭೂಸ್ವಾಧಿನದ ವಿರುದ್ಧ 150 ದಿನಗಳಿಂದ ನಡೆಸುತ್ತಿರುವ ಹೋರಾಟದ ವಿವರ ನೀಡಿದರು.
ಶಿಡ್ಲಟ್ಟಕ್ಕೆ ಬರ ಪರಿಸ್ಥಿತಿ ವೀಸಲು ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಕೆಐಎಡಿಬಿ ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಮುಖಂಡರು ಭೂಸ್ವಾಧಿನದ ವಿರುದ್ಧ 150 ದಿನಗಳಿಂದ ನಡೆಸುತ್ತಿರುವ ಹೋರಾಟದ ವಿವರ ನೀಡಿದರು.
Published on

ಶಿಡ್ಲಟ್ಟ:

ಕಾಂಗ್ರೆಸ್​ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಹೂವು, ಹಣ್ಣು, ತರಕಾರಿ ಹಾಗೂ ರೇಷ್ಮೆ, ಹೈನುಗಾರಿಕೆಯನ್ನು ನಂಬಿಕೊಂಡು ಬದುಕುತ್ತಿರುವ ರೈತರ ಫಲವತ್ತಾದ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಕಿತ್ತುಕೊಳ್ಳುವ ಪ್ರಯತ್ನ ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ಶೇ. 85ಕ್ಕೂ ಹೆಚ್ಚು ರೈತರು ಜಮೀನುಗಳನ್ನು ಸರ್ಕಾರಕ್ಕೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಭೂಸ್ವಾಧಿನ ಪ್ರಕ್ರಿಯೆ ಮುಂದುವರಿಸಿರುವುದು ಏಕೆ? ರೈತರ ಒಪ್ಪಿಗೆಯಿಲ್ಲದೆ ಭೂಮಿ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮದ ಹಿಂದೆ ರಿಯಲ್​ ಎಸ್ಟೇಟ್​ ವ್ಯವಹಾರದ ಉದ್ದೇಶವಿದೆ ಎಂಬ ಅನುಮಾನ ಮೂಡಿದೆ ಎಂದರು.

ಮಾಜಿ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ, ಮುಖಂಡರಾದ ವೇಣುಗೋಪಾಲ್​, ಮಾಜಿ ಶಾಸಕ ಎಂ.ರಾಜಣ್ಣ, ಸೀಕಲ್​ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಬಿ.ಸಿ.ನಂದೀಶ್​, ದೇವರಾಜ್​, ನರೇಶ್​, ಮೋಹನ್​, ಪ್ರತಾಪ್​, ಮಂಜುಳಾ, ರಾಗಿಣಿ, ತ್ರಿವೇಣಿ, ಆಂಜನೇಯಗೌಡ ಇದ್ದರು.

ಹೋರಾಟಕ್ಕೆ ಸ್ಪಂದಿಸದ ಸರ್ಕಾದ

ರೈತರು ಜಮೀನುಗಳನ್ನು ಉಳಿಸಿಕೊಳ್ಳಲು 150ಕ್ಕೂ ಹೆಚ್ಚು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಮನವಿ, ಪ್ರತಿಭಟನೆ ಸೇರಿ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದೇವೆ. ಆದರೂ ಇದುವರೆಗೆ ರೈತರ ಆತಂಕಕ್ಕೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಬೈರೇಗೌಡ ವಿವರಿಸಿದರು.

ಕೃಷಿಯನ್ನೇ ನಂಬಿಕೊಂಡಿರುವ ರೈತರಿಗೆ ಒಂದೆಡೆ ಬರ ಪರಿಸ್ಥಿತಿ ಸಂಕಷ್ಟ ತಂದಿದ್ದರೆ, ಮತ್ತೊಂದೆಡೆ ಭೂಸ್ವಾಧಿನದ ಆತಂಕ ಎದುರಾಗಿದೆ. ರಾಜ್ಯ ಸರ್ಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಧ್ವನಿ ಎತ್ತಲು ಮನವಿ

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್​ ರಾಮಚಂದ್ರಗೌಡ ಮಾತನಾಡಿ, ರೈತರ ಹೋರಾಟದಲ್ಲಿ ಪಕ್ಷದ ಮುಖಂಡರು ಭಾಗವಹಿಸಿದ್ದು, ರೈತರ ಪರವಾಗಿ ವಿಧಾನಸಭೆಯಲ್ಲಿಯೂ ಧ್ವನಿ ಎತ್ತುವಂತೆ ವಿಜಯೇಂದ್ರ ಅವರನ್ನು ಮನವಿ ಮಾಡಲಾಗಿದೆ ಎಂದರು. ಜಂಗಮಕೋಟೆ ಕ್ರಾಸ್​ ಬಳಿ ಬರ ಪರಿಸ್ಥಿತಿಯ ಕುರಿತು ಸ್ಥಳ ಪರಿಶೀಲಿಸಿದರು. ರೈತರು ಹಾಗೂ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ, ಮಳೆ ಕೊರತೆ, ಕೃಷಿ ಚಟುವಟಿಕೆಗಳು ಹಾಗೂ ಸ್ಥಳಿಯವಾಗಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net