ಮಳೆಯಿಲ್ಲದೆ ಆತಂಕದ ಕಾರ್ಮೋಡ

ಚಿಂತಾಮಣಿ ನಗರದ ತಪತೇಶ್ವರ ಕಾಲೋನಿಯ ನಿವಾಸಿಗಳು ಮಳೆಗಾಗಿ ಮಣ್ಣಿನ ಕಪ್ಪೆಗಳಿಗೆ ಮದುವೆ ಮಾಡಿ, ಮನೆಗಳಿಗೆ ಬಂದ ಕಪ್ಪೆಗಳಿಗೆ ಪೂಜೆ ಸಲ್ಲಿಸಿದರು.
ಚಿಂತಾಮಣಿ ನಗರದ ತಪತೇಶ್ವರ ಕಾಲೋನಿಯ ನಿವಾಸಿಗಳು ಮಳೆಗಾಗಿ ಮಣ್ಣಿನ ಕಪ್ಪೆಗಳಿಗೆ ಮದುವೆ ಮಾಡಿ, ಮನೆಗಳಿಗೆ ಬಂದ ಕಪ್ಪೆಗಳಿಗೆ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಳೆಯಿಲ್ಲದೆ ಆತಂಕದ ಕಾರ್ಮೋಡ
ಚಿಂತಾಮಣಿ: ವರ್ಷಧಾರೆಗಾಗಿ ಕಾಯುತ್ತಿರುವ ತಾಲೂಕಿನ ರೈತರಿಗೆ ಈ ಬಾರಿ ಮುಂಗಾರು ತೀವ್ರ ನಿರಾಸೆ ಮೂಡಿಸಿದೆ.
ಮುಂಗಾರು ಆರಂಭಗೊಂಡು 2 ತಿಂಗಳು ಕಳೆದರೂ ಮಳೆಯ ಸುಳಿವಿಲ್ಲ, ಹೀಗಾಗಿ ಬಿತ್ತನೆಗಾಗಿ ಭೂಮಿ ಹದಮಾಡಿಕೊಂಡು ಕಾಯುತ್ತಿದ್ದ ಅನ್ನದಾತರು ಇದೀಗ ಆತಂಕಕ್ಕೆ ಸಿಲುಕಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಚಿಂತಾಮಣಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ.80 ಮಳೆ ಕೊರತೆ ಎದುರಾಗಿದ್ದು, ಬೇಸಿಗೆಯನ್ನು ನೆನಪಿಸುವಂತೆ ಕಳೆದೆರಡು ವಾರಗಳಿಂದ ಬಿಸಿಲಿನ ತಾಪ ತೀವ್ರಗೊಂಡಿದೆ. ನೆಲಗಡಲೆ, ತೊಗರಿ, ಮುಸುಕಿನ ಜೋಳ ಬಿತ್ತನೆ ಅವಧಿ ಮುಕ್ತಾಯವಾಗಿ, ಆಗಸದಲ್ಲಿ ಬರಿ ಮೋಡಗಳು, ಜಾನುವಾರುಗಳಿಗೆ ಮೇವಿನ ಅಭಾವ ಕಂಡುಬರುತ್ತಿದೆ.
ಜೂನ್​ ಆರಂಭದಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆ ನೆಚ್ಚಿಕೊಂಡು ಕೆಲವರು ಬಿತ್ತನೆ ಮಾಡಿದ್ದರು. ಆದರೆ, ಮಳೆಯಾಗದ ಹಿನ್ನೆಲೆಯಲ್ಲಿ ಭೂಮಿಗೆ ಬಿದ್ದ ಬೀಜಗಳು ಮೊಳಕೆಯೊಡೆದರೂ ಸೂಕ್ತ ತೇವಾಂಶವಿಲ್ಲದೆ ಒಣಗುತ್ತಿವೆ. ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ನೆಲಗಡಲೆ, ತೊಗರಿ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡುವ ನಿಗದಿತ ಕಾಲಮಿತಿ ಈಗಾಗಲೇ ಮುಗಿದುಹೋಗಿದೆ. ಇನ್ನು ಮುಂದೆ ಮಳೆ ಬಂದು ಭೂಮಿ ತೇವಾಂಶಗೊಂಡರೆ ರಾಗಿ ಬಿತ್ತನೆಯೊಂದೆ ರೈತರ ಮುಂದಿರುವ ಹಾದಿಯಾಗಿದೆ.
ಬರಿ ಮೋಡಗಳ ಆರ್ಭಟ!: ಆಗಸದಲ್ಲಿ ಖಾಲಿ ಮೋಡಗಳ ಆರ್ಭಟ ಜೋರಾಗಿದೆ. ಮಳೆ ಸುರಿಸದ ಮೋಡಗಳು ಬಂದು ಬಿರುಗಾಳಿಯಲ್ಲಿ ತೇಲಿ ಹೋಗುತ್ತಿವೆಯೇ ಹೊರತು ಒಂದು ಹನಿ ನೀರೂ ಕೆಳಗೆ ಬೀಳುತ್ತಿಲ್ಲ.
ಕೆರೆ-ಕುಂಟೆ ಖಾಲಿ, ಅಂತರ್ಜಲ ಕುಸಿತ: ಸಾಕಷ್ಟು ಮುಂಗಾರು ಮಳೆಯಾಗದ ಪರಿಣಾಮ ತಾಲೂಕಿನ ಕೆರೆ-ಕುಂಟೆಗಳು ಸಂಪೂರ್ಣ ಖಾಲಿಯಾಗಿವೆ. ಇದರಿಂದಾಗಿ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆಬಾವಿಗಳಲ್ಲಿಯೂ ನೀರು ಬತ್ತಿ ಹೋಗುತ್ತಿದೆ. ಬೋರ್​ವೆಲ್​ ನೀರನ್ನು ನಂಬಿಕೊಂಡು ತರಕಾರಿ ಹಾಗೂ ತೋಟಗಾರಿಕಾ ಬೆಳೆ ಬೆಳೆಯುತ್ತಿದ್ದ ಸಣ್ಣ ರೈತರು ಈಗಾಗಲೇ ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಾಮಾನ್ಯವಾಗಿ ಮುಂಗಾರು ಮಳೆಯಾದರೆ ಗೋಮಾಳ ಹಾಗೂ ಜಮೀನುಗಳಲ್ಲಿ ಹಸಿರು ಹುಲ್ಲು ಬೆಳೆದು ದನ&ಕರುಗಳಿಗೆ ಯಥೇಚ್ಛವಾಗಿ ಮೇವು ಸಿಗುತ್ತದೆ. ಆದರೆ ಪ್ರಸ್ತುತ ಮಳೆ ಅಭಾವದಿಂದಾಗಿ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಿದೆ. ಜನರು ಕೆಲಸ ಅರಸಿ ಬೇರೆಡೆಗೆ ಗುಳೆ ಹೋಗಿಯಾದರೂ ಜೀವನ ಸಾಗಿಸುತ್ತಿದ್ದಾರೆ. ಆದರೆ ಕುಡಿಯಲು ನೀರು ಮತ್ತು ತಿನ್ನಲು ಆಹಾರವಿಲ್ಲದೆ ನರಳುತ್ತಿರುವ ಮೂಕ ಪ್ರಾಣಿ&ಪಗಳು ಬದುಕುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಪ್ರಗತಿಪರ ರೈತ ಅನಕಲ್​ ಶಿವಾನಂದ ತಿಳಿಸಿದರು.
ಮಳೆಗಾಗಿ ಪ್ರಾರ್ಥನೆ: ನಗರ ಮತ್ತು ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತಿದ ಬೆಳೆಗಳು ಒಣಗುತ್ತಿದ್ದು, ಜನ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ಬೆಳೆ ರಕ್ಷಣೆಗಾಗಿ ನಗರ ಮತ್ತು ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿಸಿದರೆ, ನಗರದ 17ನೇ ವಾರ್ಡ್​ನ ತಪ್ಪೇಶ್ವರ ಕಾಲನಿಯ ನಿವಾಸಿಗಳು ಮಣ್ಣಿನಲ್ಲಿ ಕಪ್ಪೆಗಳ ತಯಾರಿಸಿ ಅದಕ್ಕೆ ಮದುವೆ ಮಾಡಿಸಿ ವಿಶಿಷ್ಟ ರೀತಿಯಲ್ಲಿ ಮೆರವಣಿಗೆ ನಡೆಸಿದರು.
20.ಸಿ.ಎಂ.ವೈ.6
ಚಿಂತಾಮಣಿ ತಾಲೂಕಿನಲ್ಲಿ ಬಿತ್ತನೆ ಮಾಡಲು ಜಮೀನು ಹದ ಮಾಡಿ ಮಳೆಗಾಗಿ ಕಾದುಕುಳಿತ ರೈತರು.
20.ಸಿ.ಎಂ.ವೈ 7
ಚಿಂತಾಮಣಿ ನಗರದ ತಪತೇಶ್ವರ ಕಾಲೋನಿಯ ನಿವಾಸಿಗಳು ಮಳೆಗಾಗಿ ಮಣ್ಣಿನ ಕಪ್ಪೆಗಳಿಗೆ ಮದುವೆ ಮಾಡಿ, ಮನೆಗಳಿಗೆ ಬಂದ ಕಪ್ಪೆಗಳಿಗೆ ಪೂಜೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net