

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆ ಜಿ.ಅಮೃತಾಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆಯನ್ನೊಡ್ಡಿರುವ ಪ್ರಕರಣದ ನಡುವೆ ಮತಗಟ್ಟೆ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ರಾಜಕೀಯ ನಾಯಕನೊರ್ವ ನಿಂದಿಸಿರುವಂತಹುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಆರೋಪಿ. ಈತನ ಬೈಗುಳಕ್ಕೊಳಗಾದ ಮತಗಟ್ಟೆ ಅಧಿಕಾರಿ ಶಿವಶಂಕರ್. ಮತದಾರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಚರ್ಚೆ ನಡೆದಿದ್ದು ಇದೇ ವೇಳೆ ಕರ್ತವ್ಯ ನಿರ್ವಹಣೆಯ ಲೋಪಗಳನ್ನು ಮುಂದಿಟ್ಟುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚುನಾವಣಾ ಆದೇಶದಂತೆ ಎಲ್ಲೆಡೆ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ ನಾಸ್ತಿಮ್ಮನಹಳ್ಳಿಯ ವ್ಯಾಪ್ತಿಯಲ್ಲಿ ಕುಟುಂಬವೊಂದಕ್ಕೆ ಸದಸ್ಯರ ವೋಟ್ ಲಿಂಕ್ ಆಗಿರುವ ಮಾಹಿತಿಯನ್ನು ದಾಖಲೆಗಳೊಂದಿಗೆ ಶಿವಶಂಕರ್ ಕೇಳಿದ್ದಾರೆ. ಇದರ ನಡುವೆ ಮಧ್ಯೆ ಪ್ರವೇಶಿಸಿದ ಆರೋಪಿ ನಾಗೇಶ್ ರೆಡ್ಡಿ ಮೊಬೈಲ್ ಕರೆ ಮಾಡಿ ಸಂಪರ್ಕಿಸಿದ ಸಂದರ್ಭದಲ್ಲಿ ಮತದಾರ ಪಟ್ಟಿ ಮ್ಯಾಪಿಂಗ್, ಮಾಹಿತಿ ಸಂಗ್ರಹ ವೈಖರಿ, ಇತರರ ವಿಚಾರದಲ್ಲಿ ತಾರತಮ್ಯ ವಿಚಾರಗಳನ್ನು ಪ್ರಸ್ತಾಪಿಸಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಮಾಧಾನವಾಗಿ ಆಲಿಸಿ, ಉತ್ತರವನ್ನು ನೀಡಲು ಮುಂದಾದರೂ ಕಿವಿಗೊಟ್ಟಿಲ್ಲ. ತೇಜೋವಧೆ, ಬೆದರಿಕೆಯನ್ನೊಡ್ಡುವ ರೀತಿಯಲ್ಲಿ ಮಾತನಾಡಲಾಗಿದೆ. ಇದರ ಆಡಿಯೋ ವೈರಲ್ ಆಗಿದೆ.