ಚಿಂತಾಮಣಿ :ಅಮೃತ್ ನಗರೋತ್ಥಾನ&4 ಯೋಜನೆಯಡಿ ಚಿಂತಾಮಣಿಯ ಗಾಂಧಿನಗರದಲ್ಲಿ 2.74 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬೃಹತ್ ರಸ್ತೆ ಕಾಮಗಾರಿಗೆ ಹಾಕಿದ ಕಳಪೆ ಮಣ್ಣು ತೆರವುಗೊಳಿಸಿದ್ದಾರೆ.
ರಸ್ತೆ ಕಾಮಗಾರಿಗೆ ಕಳಪೆ ಮಣ್ಣು ಹಾಕುತ್ತಿರುವ ಬಗ್ಗೆ ಸ್ಥಳಿಯ ನಿವಾಸಿಗಳು ಹಾಗೂ ವಿಜಯವಾಣಿ ಸ್ಥಳಕ್ಕೆ ತೆರಳಿ ಕಾಮಗಾರಿಯ ನೈಜ ಪರಿಸ್ಥಿತಿಯ ಪೋಟೋ ಸಮೇತ ಶಾಸಕ ಡಾ.ಎಂ.ಸಿ.ಸುಧಾಕರ್ ಗಮನಕ್ಕೆ ತಂದಿದ್ದಾರೆ.
ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಗುತ್ತಿಗೆದಾರ ಕಾಮಗಾರಿಗೆ ಬಳಸಿದ ಕಳಪೆ ಮಣ್ಣನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
ನಗರದ ಗಾಂಧಿನಗರದ ಸೀನಪ್ಪ ಮನೆಯಿಂದ ಐಪಾಳ್ಯದ ಮಾಜಿ ಕೌನ್ಸಿಲರ್ ಮಂಜು ಮನೆ ಮಾರ್ಗವಾಗಿ ಟವರ್ ವೆಂಕಟೇಶ್ ಮನೆಯವರೆಗೆ ಹೊಸ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಾಮಗಾರಿ ಪ್ರಾರಂಭಿಸಲಾಗಿತ್ತು. road work
ಗುತ್ತಿಗೆದಾರ ಕಾಮಗಾರಿ ವೇಳೆ ರಸ್ತೆಗೆ ಕಲುಷಿತ ಮಣ್ಣು ಹಾಕಿದ್ದರು. ಈ ಮಣ್ಣು ಹಾಕದಂತೆ ನಿವಾಸಿಗಳು ಗುತ್ತಿಗೆದಾರರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ.
ನಂತರ ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಶಾಸಕರು ತರಾಟೆಗೆ ತೆಗೆದುಕೊಂಡ ಬಳಿಕ ಇಡೀ ರಸ್ತೆಗೆ ಹಾಕಿದ ಮಣ್ಣನ್ನು ಗುತ್ತಿಗೆದಾರ ಜೆಸಿಬಿಯಲ್ಲಿ ತೆಗೆದು ಬೇರೆ ಕಡೆ ಸಾಗಿಸುವ ಮೂಲಕ ಕಳಪೆ ಮಣ್ಣು ಹಾಕುವುದಕ್ಕೆ ಬ್ರೇಕ್ ಹಾಕಿದ್ದಾರೆ.