ಕಳೆದ ೨೦೨೫ ನೇ ಸಾಲಿನ ಆ.೨೯ ರಂದು ೧ ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಬಾಲಕಿಯ ಬಾಲಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರೋಪಗಳ ಸುರಿಮಳೆಯಾಗಿತ್ತು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಮಕ್ಕಳನ್ನು ಮನೆಗೆ ಕಳುಹಿಸಲು ಲಂಚಕ್ಕೆ ಬೇಡಿಕೆಯಿಡುತ್ತಾರೆ. ಮಕ್ಕಳ ನಡುವೆ ತಾರತಮ್ಯ, ವ್ಯಂಗ್ಯವಾಡುವ ಧೋರಣೆ ಪ್ರದರ್ಶಿಸುತ್ತಾರೆ ಎಂಬುದಾಗಿ ದೂರು ಸಲ್ಲಿಸಲಾಗಿತ್ತು. ಅದರಲ್ಲೂ ಪಾಲಕರಿಂದ ೫೦ ಸಾವಿರ ರೂ ಪಡೆದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರಕರಣದ ತನಿಖೆ ನಡೆಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದು ಪಾಲಕರು ಹಾಗೂ ಮಕ್ಕಳು ಆರೋಪಗಳನ್ನು ದೃಢಪಡಿಸಿದ್ದು ಪಾಲಕರಿಂದ ಲಂಚ ಕೇಳಿದ ಆಡಿಯೋ ರೆಕಾರ್ಡ್ ಹಾಗೂ ಸಲಹಾ ಪೆಟ್ಟಿಗೆಯಲ್ಲಿ ಹಣ ಪಡೆಯುತ್ತಿರುವುದರ ಬಗೆಗಿನ ೧೨ ದೂರು ಪತ್ರಗಳು ಪತ್ತೆಯಾಗಿವೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗಿತ್ತು. ನಿಯಮಾನುಸಾರ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾಗಿದೆ. ನಿಯಮಗಳನ್ನು ಉಲ್ಲಂಘಿಸಿ, ಲೋಪಗಳನ್ನು ಎಸಗಿರುವುದರ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಕಾರ್ಯಕ್ರಮ ವ್ಯವಸ್ಥಾಪಕರು, ಅಧೀಕ್ಷಕರನ್ನೊಳಗೊಂಡಂತೆ ನಿರ್ದೇಶನಾಲಯದಿಂದ ರಚಿಸಿದ್ದ ತನಿಖಾ ತಂಡವು ಸಮಿತಿಯು ಸಹ ವರದಿ ನೀಡಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಮುನಿನಾರಾಯಣಸ್ವಾಮಿ, ಸದಸ್ಯರಾದ ಬಿ.ಆರ್.ಮಹೇಶ್, ತ್ರಿಭುವನೇಶ್ವರಿಯನ್ನು ಅಮಾನತ್‌ಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ತಿಳಿಸಿದ್ದಾರೆ