17ರಿಂದ ಶ್ರೀ ಗಿರಿಜಾ ಕಲ್ಯಾಣೋತ್ಸವ

ಕಳಸ ಕಲಶೇಶ್ವರ ದೇವರು.
ಕಳಸ ಕಲಶೇಶ್ವರ ದೇವರು.
Published on: 

ಕಳಸ: ಪೌರಾಣಿಕ ಹಿನ್ನೆಲೆಯ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗಿರಿಜಾ ಕಲ್ಯಾಣೋತ್ಸವ ಅಂಗವಾಗಿ ನ.17ರಿಂದ 24ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಪ್ರದಾಯದಂತೆ ವಿಶೇಷ ಪೂಜೆ, ಹೋಮ ಇತರ ವಿಧಿವಿಧಾನಗಳು ನಡೆಯಲಿವೆ. 17ರಂದು ಕಾರ್ತಿಕ ಶುದ್ಧ ಅಷ್ಟಮಿಯಂದು ಪೂಜೆ ಹಾಗೂ ಅಂಕುರಾರ್ಪಣೆ ನಡೆಯಲಿದೆ. 18 ಮತ್ತು 19ರಂದು ವಿವಿಧ ಪೂಜೆಗಳು, ಹೋಮ, ಧ್ವಜಾರೋಹಣ, ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ರಾತ್ರಿ ಕಾರ್ತಿಕ ದೀಪೋತ್ಸವ ನಡೆಯಲಿದೆ.

20ರಂದು ಕಾರ್ತಿಕ ಶುದ್ಧ ಏಕಾದಶಿಯಂದು ವಿಶೇಷ ಅಭಿಷೇಕ, ಹಗಲು ಶತಾವರ ರುದ್ರಾಭಿಷೇಕ ಹಾಗೂ ರಂಗಪೂಜೆ ನಡೆಯಲಿವೆ. ಇದೇ ದಿನ ರಾತ್ರಿ 3 ಗಂಟೆಗೆ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ ವೈಭವದಿಂದ ನಡೆಯಲಿದೆ.

21ರಂದು ಮಹಾಪೂಜೆ, ರಾತ್ರಿ ಕದಷೀರಾಬ್ಧಿ, ತುಳಸಿ ಪೂಜೆ, ಚಿಕ್ಕರಥೊತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 22ರಂದು ಬಿಂದುಮಾಧವ ದೇವರ ಆಗಮನ ಹಾಗೂ ರಾತ್ರಿ ಡೋಲೋತ್ಸವ, 23ರಂದು ಕುಂಕುಮೋತ್ಸವ, ರುದ್ರತೀರ್ಥದಲ್ಲಿ ಅವಭೃತ ಸ್ನಾನ ಹಾಗೂ ಧ್ವಜಾವರೋಹಣ ನಡೆಯಲಿವೆ.

24ರಂದು ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಮಹಾಪೂಜೆ, ಧಾತ್ರಿ ಹೋಮ, ವಶಿಷ್ಠಾಶ್ರಮಕ್ಕೆ ಆಗಮನ, ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ರಾತ್ರಿ ಕೃತ್ತಿಕಾ ದೀಪೋತ್ಸವ, ತ್ರಿಪುರೋತ್ಸವ ಹಾಗೂ ಹರಿಹರ ಸಮಾಗಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 20ರಂದು ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ ಹಳುವಳ್ಳಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡದಿಂದ ಪಂಚವಟಿ-ಇಂದ್ರಜಿತ್ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ಮಂಜುನಾಥ್ ತಿಳಿಸಿದ್ದಾರೆ.