

ಚಿಕ್ಕಬಳ್ಳಾಪುರ: ಪಿಎಸ್‌ಐ ಹಗರಣದಲ್ಲಿ ಗೃಹ ಇಲಾಖೆ ಮಾತ್ರವಲ್ಲದೆ ರಾಜ್ಯ ಸರ್ಕಾರದ ಪಾತ್ರವಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶನಿವಾರ ಕೈಗೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷದ ಅಂಗವಾಗಿ 75 ಕಿ.ಮೀ. ಪಾದಯಾತ್ರೆ ಮತ್ತು ಸಿದ್ದರಾಮಯ್ಯ 75ನೇ ವರ್ಷದ ಅಮೃತ ಮಹೋತ್ಸವದ ಪೂರ್ವ ಸಿದ್ಧತೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಿಎಸ್‌ಐ ಹಗರಣದಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ. ಬಂಧಿತ ಐಡಿಜಿಪಿ ಅಮೃತ್ ಪೌಲ್ ನ್ಯಾಯಾಧೀಶರ ಎದುರು ಹೇಳಿಕೆಯನ್ನು ದಾಖಲಿಸದಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವೇ ಚಾಟಿ ಬೀಸಿದೆ. ಆದರೂ ಸರ್ಕಾರವು ಪ್ರಭಾವಿಗಳ ರಕ್ಷಣೆಯಲ್ಲಿ ತೊಡಗಿದೆ. ಗೃಹ ಇಲಾಖೆಯ ಜತೆಗೆ ಆಡಳಿತ ಯಂತ್ರಾಂಗದ ನಾಯಕರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ರಾಜ್ಯದಲ್ಲಿ ಶೇ.40 ಭ್ರಷ್ಟಾಚಾರದ ಆರೋಪವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ ಸ್ವತಃ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುತ್ತಿರುವುದರ ಬಗ್ಗೆ ಅಳಲು ತೋಡಿಕೊಂಡಿರುವುದು ಆಡಳಿತ ವೈಖರಿ ಹೇಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಮುಂಬರುವ ಚುನಾವಣೆಯಲ್ಲಿ ಕೇಂದ್ರ ಮತ್ತು ಬಿಜೆಪಿ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಶಾಸಕರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರರೆಡ್ಡಿ, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ಶಾಸಕರಾದ ಡಾ ಎಂ.ಸಿ.ಸುಧಾಕರ್, ಎನ್. ಸಂಪಂಗಿ, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮತ್ತಿತರರು ಇದ್ದರು.
ವಿದುರಾಶ್ವತ್ಥದಲ್ಲಿ ಕಾರ್ಯಕ್ರಮ: ಸ್ವಾತಂತ್ರ್ಯ ದಿನಾಚರಣೆ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಯಲಿದೆ. ಜನರ ಬಳಿಗೆ ತೆರಳಿ, ದೇಶ ಮತ್ತು ರಾಜ್ಯದ ಬೆಳವಣಿಗೆಗಳನ್ನು ತಿಳಿಸಲಾಗುವುದು. ಕೊನೆಗೆ ಸ್ವಾತಂತ್ರ್ಯ ಹೋರಾಟದ ಸ್ಥಳ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ವಿಶೇಷ ಕಾರ್ಯಕ್ರಮ ಕೈಗೊಳ್ಳಲಿದ್ದು ವಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.
10 ಸಾವಿರ ಭಾಗಿ ನಿರೀಕ್ಷೆ: ದಾವಣಗೆರೆಯಲ್ಲಿ ಆ.3 ರಂದು ಕೈಗೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ 75ನೇ ವರ್ಷದ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯದ ಪ್ರಮುಖ ನಾಯಕರು ಆಗಮಿಸಲಿದ್ದಾರೆ. ಇದರಲ್ಲಿ ವಿವಿಧ ಭಾಗಗಳಿಂದ 5 ಲಕ್ಷ ಮಂದಿ ಭಾಗಿಯಾಗಲಿದ್ದಾರೆ. ಜಿಲ್ಲೆಯಿಂದ ಕನಿಷ್ಠ 10 ಸಾವಿರ ಮಂದಿ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.