

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಜಾರಿಯ ನಡುವೆ ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿಯ ತ್ಯಾಜ್ಯ ಸಂಸ್ಕರಿಸಿದ ನೀರು ಪ್ರಾಯೋಗಿಕವಾಗಿ ಗುರುವಾರ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಹರಿದಿದೆ.
2017ರ ಸೆಪ್ಟೆಂಬರ್ 18 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 883.54 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಿದ್ದರು. ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಸಂಸ್ಕರಿಸಿದ ನೀರು ಜಿಲ್ಲೆಗೆ ಹರಿದಿದ್ದು, ಅಂತರ್ಜಲಮಟ್ಟ ವೃದ್ಧಿಗೆ ಪೂರಕವಾಗಿರುವ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಸಂತಸ ವ್ಯಕ್ತವಾಗಿದೆ.
44 ಕೆರೆಗಳಿಗೆ ನೀರು: ಯೋಜನೆಯಲ್ಲಿ ಜಿಲ್ಲೆಯ 4 ತಾಲೂಕುಗಳಲ್ಲಿನ 44 ಕೆರೆಗಳಿಗೆ ನೀರು ಪೂರೈಸಬಹುದು ಹಾಗೂ ವಾರ್ಷಿಕ 2.70 ಟಿಎಂಸಿ ನೀರು ಹರಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಇದಕ್ಕೆ ಈಗಾಗಲೇ ಬರೋಬ್ಬರಿ 114 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದು ಬಾಗಲೂರು ಕೆರೆಯಿಂದ ಚಿಕ್ಕಬಳ್ಳಾಪುರ ಕಂದವಾರ ಕೆರೆಗೆ ಹರಿಯುವ ಮೂಲಕ ಎಚ್.ಎನ್.ವ್ಯಾಲಿ ನೀರು ಜಿಲ್ಲೆಗೆ ಹರಿದಂತಾಗಿದೆ.
ಇಲ್ಲಿನ ಕೆರೆಯಲ್ಲಿ ಪಂಪ್‌ಹೌಸ್ ಮತ್ತು ಸ್ವಿಚ್‌ಗೇರ್ ಕೊಠಡಿಯ ಸಿವಿಲ್ ಕಾಮಗಾರಿ ಮುಗಿಸಿದ್ದು ಪಂಪ್ ಅಳವಡಿಕೆ ಮತ್ತು ವಿದ್ಯುತ್ ಕಾಮಗಾರಿ ಮಾತ್ರ ಬಾಕಿ ಇದೆ. ಕಂದವಾರ ಕೆರೆ ತುಂಬಿದ ಬಳಿಕ ಇತರ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ.
3ನೇ ಹಂತದ ಶುದ್ಧೀಕರಣ?: ಪ್ರಸ್ತುತ ಎಚ್.ಎನ್.ವ್ಯಾಲಿಯ ತ್ಯಾಜ್ಯ ನೀರನ್ನು ಎರಡು ಬಾರಿ ಸಂಸ್ಕರಿಸಿ ಪೂರೈಸಲಾಗುತ್ತಿದೆ. ಆದರೆ, ಜನರ ಆತಂಕ ನೀಗಿಸುವ ಉದ್ದೇಶದಿಂದ ಮೂರು ಹಂತದಲ್ಲಿ ಶುದ್ಧೀಕರಿಸಿ ಪೂರೈಸುವ ಭರವಸೆಯನ್ನು ಈ ಹಿಂದೆ ರಾಜ್ಯ ಸರ್ಕಾರ ನೀಡಿತ್ತು. ಆದರೆ, ಪ್ರಸ್ತುತ ಅಂತರ್ಜಲಮಟ್ಟ ಹೆಚ್ಚಳಕ್ಕೆ ಮಾತ್ರ ಉದ್ದೇಶಿಸಿರುವುದರಿಂದ ಎರಡು ಹಂತದ ಶುದ್ಧೀಕರಣ ಸಾಕು ಎನ್ನುವುದು ಅಧಿಕಾರಿಗಳ ಮಾತು.
ಹಿಂದೆ ವಿರೋಧ ವ್ಯಕ್ತವಾಗಿತ್ತು : ಹೆಬ್ಬಾಳ ಮತ್ತು ನಾಗವಾರ ವ್ಯಾಲಿಯ ನೀರಿನಲ್ಲಿ ವೈದ್ಯಕೀಯ ಮತ್ತು ಕೈಗಾರಿಕೆಯ ತ್ಯಾಜ್ಯ ಮಿಶ್ರಣವಾಗಿದ್ದು, ಮಾರಕ ವೈರಾಣುಗಳಿಂದ ಕೂಡಿದೆ. ಇದನ್ನು ಪೂರೈಸುವುದರಿಂದ ಅಂತರ್ಜಲ ಕಲುಷಿತಗೊಳ್ಳುವುದರ ಜತೆಗೆ ಕೆರೆಗಳು ಹಾಳಾಗುತ್ತವೆ. ಈ ನೀರು ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಇಷ್ಟೇ ಅಲ್ಲದೆ ಶಾಶ್ವತ ನೀರಾವರಿ ಹೋರಾಟ ಸಮಿತಿ ನೀರಿನ ಶುದ್ಧತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ನಡುವೆಯೇ ಯಾವ ಯೋಜನೆಯಿಂದಲಾದರೂ ಶುದ್ಧ ನೀರು ಪೂರೈಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಇದೀಗ ಪ್ರಾಯೋಗಿಕವಾಗಿ ಸಂಸ್ಕರಿಸಿದ ನೀರು ಇಲ್ಲಿನ ಕಂದವಾರ ಕೆರೆಗೆ ಬಂದಿದೆ.
ಖುಷಿ ವ್ಯಕ್ತಪಡಿಸಿದ ರೈತರು : ಕೋಲಾರ ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲಮಟ್ಟ ಸುಧಾರಣೆ ಕಂಡಿದೆ. ಇದೀಗ ಚಿಕ್ಕಬಳ್ಳಾಪುರ ಎಚ್.ಎನ್.ವ್ಯಾಲಿ ನೀರು ಪೂರೈಕೆಯಿಂದ ಕೆರೆಗಳಿಗೆ ಮತ್ತು ಅಂತರ್ಜಲಕ್ಕೆ ಮರುಜೀವ ನೀಡಿದಂತಾಗಿದೆ. ಬರದಿಂದ ಕಂಗೆಟ್ಟಿರುವ ಜಿಲ್ಲೆಗೆ ಹೊಸ ನೀರಾವರಿ ಯೋಜನೆಯು ಗಂಭೀರ ಸಮಸ್ಯೆಗಳ ತಾತ್ಕಾಲಿಕ ಪರಿಹಾರಕ್ಕೆ ಸಹಕಾರಿಯಾಗಿದ್ದು, ಸಮಗ್ರ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ.