

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನೆರೆ ಹಾವಳಿಯ ಸಂದರ್ಭದಲ್ಲಿ ಹುಟ್ಟುಹಬ್ಬದ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವದ ವಿಚಾರವಾಗಿ ವ್ಯಂಗ್ಯವಾಡಿದ್ದಾರೆ.
ತಾಲೂಕಿನ ಕೊಂಡೇನಹಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ 13 ಜಿಲ್ಲೆಗಳಲ್ಲಿ ನೆರೆ ಹಾವಳಿ ಹೆಚ್ಚಾಗಿದೆ. ಇದಕ್ಕೆ ಆರೋಗ್ಯ ಇಲಾಖೆಯಿಂದ ಕೇಂದ್ರಗಳನ್ನು ತೆರೆದು ಅಗತ್ಯ ಚಿಕಿತ್ಸೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಸಂತ್ರಸ್ತರ ಪ್ರದೇಶಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಿ ಬಗೆಹರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬದ ಉತ್ಸವ ಆಚರಣೆಯಲ್ಲಿ ತೊಡಗಲಾಗಿದೆ. ಇದಕ್ಕೆ ಯಾರ ವಿರೋಧ ಇಲ್ಲ. ಅಡ್ಡಿಪಡಿಸುವುದೂ ಇಲ್ಲ. ಆದರೆ, ಜನರಿಗೆ ಯಾವ ಸಂದರ್ಭದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದರ ಅರಿವಾಗಿದೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕರು ಒಳ್ಳೆಯ ಕೆಲಸಕ್ಕೆ ಮೆಚ್ಚಿಕೊಳ್ಳದಿದ್ದರೂ ಪರವಾಗಿಲ್ಲ. ಆದರೆ, ಸುಮ್ಮನೆ ಟೀಕಿಸುವುದು ಸರಿಯಲ್ಲ. ಕರೊನಾ ಸೋಂಕನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. 200 ಕೋಟಿ ಡೋಸ್ ನೀಡುವಿಕೆ, 10 ಕೋಟಿ ಮಂದಿಗೆ ಪರೀಕ್ಷೆ, ಹಿಂದೆ ಕೇವಲ 10 ಸಾವಿರ ಹಾಸಿಗೆ ವ್ಯವಸ್ಥೆ ಇದ್ದ ಸಂದರ್ಭದಲ್ಲಿ 40 ಸಾವಿರ ಆಕ್ಸಿಜನ್ ಹಾಸಿಗೆಯ ಸೌಕರ್ಯ ಒದಗಿಸಿರುವಿಕೆಯು ದೊಡ್ಡ ಸಾಧನೆಯವಲ್ಲವೇ?. ಆದರೆ, ಕಾಮಾಲೆ ಕಣ್ಣಿನಿಂದ ನೋಡುವವರಿಗೆ ಎಲ್ಲವೂ ಹಳದಿಯಾಗಿರುತ್ತದೆ ಎಂದರು.
ಮೊದಲು ಸರ್ಕಾರದ ಆರ್ಥಿಕ ನೆರವು ಪಡೆಯಲು ವಿವಿಧ ಹಂತಗಳಲ್ಲಿನ ಆಯಾ ಅಧಿಕಾರಿಗಳಿಗೆ ಜನರು ಲಂಚ ಕೊಡಬೇಕಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. ಕೃಷಿ ಸಮ್ಮಾನ್, ತಲಾ 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆಯ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನ, ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವಿನ ಜತೆಗೆ ಉತ್ತಮ ತರಬೇತಿ, ಮಾರುಕಟ್ಟೆ ವ್ಯವಸ್ಥೆ ಒದಗಿಸುತ್ತಿರುವುದು ಶ್ಲಾಘನೀಯ. ನಮ್ಮ ಸರ್ಕಾರವು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.
ಸಾಧನೆಯ ಪುಸ್ತಕ ಬಿಡುಗಡೆ: ವಿಪಕ್ಷಗಳ ಟೀಕೆ ಮತ್ತು ಪ್ರಶ್ನಿಸುವ ವಿಚಾರ ಸಾಮಾನ್ಯ. ಇದಕ್ಕೆ ಒಂದು ವರ್ಷದಲ್ಲಿ ತೋರಿದ ಸಾಧನೆಗೆ ಸಂಬಂಧಿಸಿದ ಪುಸಕ್ತ ಬಿಡುಗಡೆಗೊಳಿಸಲಾಗುವುದು. ಸುಮ್ಮನೆ ಆರೋಪಿಸುವ ಕಾಂಗ್ರೆಸ್ ನಾಯಕರಿಗೆ ಓದಲು ಕಳುಹಿಸಿಕೊಡಲಾಗುತ್ತದೆ. ಆಗಲಾದರೂ ಸಾಧನೆಯ ಬಗ್ಗೆ ತಿಳಿದುಕೊಳ್ಳಬಹುದು ಎಂದು ಸಚಿವ ಸುಧಾಕರ್ ತಿಳಿಸಿದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಕೊಂಡೇನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಸ್ತ್ರೀ ಶಕ್ತಿ ಭವದ ಉದ್ಘಾಟನೆ, ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ಕಾಮಗಾರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೂಮಿಪೂಜೆ ನೆರವೇರಿಸಿದರು. ಇದೇ ವೇಳೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಖರೀದಿಸಿರುವ ಕಸ ಸಂಗ್ರಹ ವಾಹನಕ್ಕೆ ಚಾಲನೆ ನೀಡಿದರು. ಬಳಿಕ ಗ್ರಾಮದ 1,100 ಕುಟುಂಬಗಳಿಗೆ ಕಸದ ಬುಟ್ಟಿ ವಿತರಿಸಿದರು. ಹಲವು ಮೂಲಸೌಕರ್ಯ ಒದಗಿಸುವುದರೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದನ್ನು ಜನರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಗ್ರಾಪಂ ಅಧ್ಯಕ್ಷೆ ಪವಿತ್ರಾ ಶೈಲೇಂದ್ರ ಕುಮಾರ್ ಮತ್ತಿತರರು ಇದ್ದರು.