

ಚಿಕ್ಕಬಳ್ಳಾಪುರ: ಸ್ನೇಹದ ಅತಿಯಾದ ವಿಶ್ವಾಸವು ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟರೆ, ಎದುರಾಳಿಗಳ ಅಡ್ಡಿ, ಮಾತಿನ ಜಟಾಪಟಿಯ ನಡುವೆಯೂ ಖುದ್ದು ಸದಸ್ಯರ ಬೆಂಗಾವಲಿಗೆ ನಿಂತು ಸಂಸದ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ವಿಜಯದ ಸಂಭ್ರಮ ಕಂಡಿತು.
ಇಲ್ಲಿನ ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಪಕ್ಷೀಯ 16 ಸದಸ್ಯರು, ಶಾಸಕ, ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿದಂತೆ 19 ಮತಗಳನ್ನು ಹೊಂದಿತ್ತು. ಇದರ ನಡುವೆ ನಾಲ್ವರು ಸದಸ್ಯರು ಎದುರಾಳಿ ಬಣದಲ್ಲಿ ಸೇರಿಕೊಂಡರೂ ಸ್ನೇಹ, ಪ್ರಮಾಣಕ್ಕೆ ಕಟ್ಟು ಬಿದ್ದು ಮತದಾನದ ಸಂದರ್ಭದ ಕೊನೆ ಕ್ಷಣದಲ್ಲಿ ಬಿಜೆಪಿ ಕೆಲ ಸದಸ್ಯರನ್ನು ಸೆಳದುಕೊಂಡು ಅವರು ಬೆಂಬಲಿಸಲಿದ್ದಾರೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಆದರೆ, ಅದೇ ಕೈ ಕೊಟ್ಟಿತ್ತು. ಸ್ಪಷ್ಟ ಬಹುಮತದ ನಡುವೆಯೂ ಮುಖಭಂಗ ಅನುಭವಿಸಿತು.
*ಕೈ ಕೊಟ್ಟ ಆರು ಸದಸ್ಯರು*
ಸ್ವಪಕ್ಷೀಯ ಕಾಂಗ್ರೆಸ್ ಗೆ ಸದಸ್ಯರಾದ ನೇತ್ರಾವತಿ, ನಿರ್ಮಲ ಪ್ರಭು, ಸತೀಶ್, ಸ್ವಾತಿ ಮಂಜುನಾಥ್, ಅಂಬಿಕಾ ಮತ್ತು ರತ್ನಮ್ಮ ಕೈ ಕೊಟ್ಟರು.
ಕಾಲಿಗೆ ಬಿದ್ದ ಕಾಂಗ್ರೆಸ್ ಅಭ್ಯರ್ಥಿ*
ಸ್ವಪಕ್ಷೀಯ ಆರು ಮಂದಿ ಸದಸ್ಯರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಕಾಲಿಗೆ ಬಿದ್ದು ಮನವೊಲಿಸಲು ಯತ್ನಿಸಿದರು.
ನಮ್ಮನ್ನು ಬಿಟ್ಟು ಹೋಗಬೇಡಿ, ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡರು. ಇದಕ್ಕೆ ಸೊಪ್ಪು ಹಾಕದ ಸದಸ್ಯರು ಜಿಗಿದುಕೊಂಡು ಹೊರಟು ಹೋದರು.
*ಕಿತ್ತು ಬಿಸಾಡಿದ ಅಭ್ಯರ್ಥಿ*
ಬಲವಂತವಾಗಿ ವಿಪ್ ಆದೇಶ ಪಾಲನೆಯ ಪತ್ರ ಸಚಿವರನ್ನು ಮಾತಾಡಿಸಲು ಮೊಬೈಲ್ ವಿತರಣೆಯ ಸಂದರ್ಭದಲ್ಲಿ ತಳ್ಳಾಟ ನಡೆಯಿತು.
ಸ್ವತಃ ಗಜೇಂದ್ರ ಕಾಗದ ಪತ್ರಗಳನ್ನು ಕಿತ್ತು ಬಿಸಾಡಿದರು. ಇದೆಲ್ಲವೂ ನಮ್ಮ ಹತ್ತಿರ ಕೆಲಸಕ್ಕೆ ಬರಲ್ಲ ಎಂದೇಳಿ ಕೋಪದಲ್ಲಿ ಹೊರಟು ಹೋದರು. ಸದಸ್ಯರನ್ನು ಎಳೆದುಕೊಂಡು ಮಾತಾಡಿಸಲು ಬಂದವರನ್ನು ತಳ್ಳಲಾಯಿತು. ಇದರಿಂದ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು.