ವಾರದಲ್ಲಿ ಬಿದ್ದ ಮಳೆ, ಜಿಲ್ಲೆಯೊಂದರಲ್ಲಿಯೇ 101 ಮನೆಗಳಿಗೆ ಹಾನಿ, ಬೆಳೆ ನಾಶ

IMG-20241025-WA0199.jpg
Published on


ಚಿಕ್ಕಬಳ್ಳಾಪುರ : ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ 101 ಮನೆಗಳಿಗೆ ಹಾನಿಯಾಗಿದೆ.‌ 77 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.
ಗೌರಿಬಿದನೂರು
ತಾಲೂಕು ವ್ಯಾಪ್ತಿಯಲ್ಲಿ ಮಳೆ ಹಾನಿಗೊಳಗಾದ ಗ್ರಾಮಗಳಿಗೆ  ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಮಗ್ರ ವರದಿ ಪಡೆದರು.
ಭಾಗಶಃ ಹಾನಿಗೊಳಗಾದ ಮನೆಗಳಿಗೆ 60 ಸಾವಿರ ಹಾಗೂ ಪೂರ್ತಿ ಹಾನಿಗೊಳಗಾದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಸಂತ್ರಸ್ತರು ಆತಂಕ ಪಡಬೇಕಾದ ಅಗತ್ಯವಿಲ್ಲ. ಸ್ಥಳೀಯ ಅಧಿಕಾರಿಗಳು ಸಲ್ಲಿಸುವ ವರದಿ ಆಧಾರದ ಮೇಲೆ ಶೀಘ್ರ ಪರಿಹಾರ ವಿತರಣೆಯಾಗಲಿದೆ ಎಂದರು.  
ಇದೇ ವೇಳೆ ಗ್ರಾಮದ ವಯೋವೃದ್ಧರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಗುಂಡಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಬಳಿ ಮುಸುಕಿನ ಜೋಳದ ಬೆಳೆಯನ್ನು ಒಕ್ಕಣೆ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಬಂದಿರುವ ಇಳುವರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ನಗರದ ಕಿಂಡಿ ಅಣೆಕಟ್ಟು ಬಳಿ ಹರಿಯುತ್ತಿರುವ ಉತ್ತರ ಪಿನಾಕಿನಿ ನದಿ ನೀರನ್ನು ವೀಕ್ಷಿಸಿದರು. ಬಳಿಕ
ನಾಡಕಚೇರಿಗೆ ಭೇಟಿ ನೀಡಿದರು.‌ 2 ದಿನಗಳ ಹಿಂದಷ್ಟೇ ಇಲ್ಲಿಗೆ ಕಚೇರಿ ಸ್ಥಳಾಂತರಿಸಲಾಗಿದೆ. ಆದಾಗ್ಯೂ ಜನರಿಗೆ ತೊಂದರೆಯಾಗದಂತೆ ಕಂಪ್ಯೂಟರ್, ಪ್ರಿಂಟಿಂಗ್ ಮಿಷನ್ ಮೂಲ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಂಡು ದಿನಕ್ಕೆ ಕನಿಷ್ಠ 30-40 ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ಒದಗಿಸಲಾಗುತ್ತಿದೆ. ಪೂರ್ಣ ಪ್ರಮಾಣದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರಿ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ, ತಾ.ಪಂ ಇಒ ಜಿ ಕೆ ಹೊನ್ನಯ್ಯ, ಪಿಡಿಒ ಕರಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net