ಪ್ರೇಯಸಿ ಜತೆ ಪಲ್ಲಂಗದಾಟವಾಡಿ ಲಾಕ್​ಡೌನ್ ವೇಳೆ ಮಾಸ್ಟರ್ ಪ್ಲಾನ್ ಮಾಡಿ ಸಿಕ್ಕಿಬಿದ್ದ ವಂಚಕ

Lovvidavvi
Published on

ಚಿಕ್ಕಬಳ್ಳಾಪುರ: ಕರೊನಾ ವೈರಸ್​ ನಿಯಂತ್ರಿಸಲು ಹೇರಲಾಗಿದ್ದ ಲಾಕ್​ಡೌನ್​ ಸಮಯವನ್ನು ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಒಬ್ಬಳ ಜತೆ ಲವ್ವಿ ಡವ್ವಿ ನಡೆಸಿ, ಮತ್ತೊಬ್ಬಳ ಜತೆ ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರೇಮದ ಹೆಸರಲ್ಲಿ‌ ಪಲ್ಲಂಗದಾಟವಾಡಿದ‌ ವಂಚಕನ ಹೆಸರು ‌ಪ್ರಮೋದ್ ಕುಮಾರ್. ಈತ ಚಿಕ್ಕಬಳ್ಳಾಪುರ ತಾಲ್ಲೂಕು ಮರಸನಹಳ್ಳಿಯ ನಿವಾಸಿ. ಪ್ರೀತಿಯ ಹೆಸರಲ್ಲಿ ಮದುವೆಯಾಗುವುದಾಗಿ ತಮಿಳುನಾಡು ಮೂಲದ ನರ್ಸ್​ ಒಬ್ಬರನ್ನು ನಂಬಿಸಿ, ಆಕೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಅಲ್ಲದೆ, ಮೂರು ಬಾರಿ ಗರ್ಭಪಾತ ಕೂಡ ಮಾಡಿಸಿದ್ದಾನೆ ಎಂಬ ಆರೋಪ ಪ್ರಮೋದ್​ ವಿರುದ್ಧ ಕೇಳಿಬಂದಿದೆ.

ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಇದೇ ಸೂಕ್ತ ಸಮಯ ಅಂದುಕೊಂಡು ಪ್ರಮೋದ್​ ಮತ್ತೊಬ್ಬಳ ಜತೆ ಗುಟ್ಟಾಗಿ ಮದುವೆಯಾಗಿದ್ದಾನೆಂದು ನರ್ಸ್ ಗಂಭೀರ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ನರ್ಸ್​ ಪರಿಚಯ ಹೇಗೆ?

ಚಿಕ್ಕಬಳ್ಳಾಪುರ ನಗರದ ಖಾಸಗಿ ಕ್ಲಿನಿಕ್​ನಲ್ಲಿ ಪ್ರಮೋದ್ ಕುಮಾರ್ ಮತ್ತು ನರ್ಸ್​ ಕೆಲಸ ಮಾಡುತ್ತಿದ್ದಾಗ ಇಬ್ಬರ ನಡುವೆ ಪರಿಚಯವಾಗಿತ್ತು. ಬಳಿಕ ಪ್ರೇಮಾಂಕುರವಾಗಿತ್ತು. ಪ್ರೇಯಸಿಯನ್ನು ಪ್ರಮೋದ್​ ಕುಟುಂಬದವರಿಗೆ ಪರಿಚಯ ಮಾಡಿ ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ನಡೆಸಿ, ಮೂರನೇ ಬಾರಿ ಗೊತ್ತಿಲ್ಲದಂತೆ ಟ್ಯಾಬ್ಲೆಟ್ ಕೊಟ್ಟು ಅಬಾರ್ಷನ್ ಮಾಡಿಸಿದ್ದ ಎನ್ನಲಾಗಿದೆ.

ಆತ್ಮಹತ್ಯೆ ಬೆದರಿಕೆ

ಚಿಕ್ಕಬಳ್ಳಾಪುರಕ್ಕೆ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಮೋದ್ ಬೆದರಿಕೆಯೊಡ್ಡಿದ್ದ ಎಂದು ನರ್ಸ್​ ತಿಳಿಸಿದ್ದಾಳೆ. ಅಲ್ಲದೆ, ಮದುವೆಯಾಗುತ್ತೇನೆಂದು ಲಕ್ಷ ಲಕ್ಷ ಹಣ ಪೀಕಿದ್ದಾನೆಂದು ದೂರಿದ್ದಾಳೆ. ಇದೀಗ ಪ್ರಮೋದ್​ ಪೊಲೀಸರ ವಶವಾಗಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net