

ಚಿಕ್ಕಬಳ್ಳಾಪುರ: ಸಂಸದ ಡಾ ಕೆ.ಸುಧಾಕರ್ ಅವಿವೇಕಿ ಅಂತಾ ಹೇಳಲ್ಲ. ಆದರೆ, ಅವರ ಮಿದುಳಿನಲ್ಲಿ ಸಮಸ್ಯೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಸಂಕಷ್ಟದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಅಮಾಯಕರು ಮೃತಪಟ್ಟ ದುರಂತ ಪ್ರಕರಣದ ನೈತಿಕ ಹೊಣೆಯನ್ನು ಸಂಸದ ಡಾ ಕೆ.ಸುಧಾಕರ್ ಹೊರಲಿಲ್ಲ. ಈಗ ಜಿಲ್ಲಾಡಳಿತ ಭವನದಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಹೊರಗುತ್ತಿಗೆಯಾಧಾರಿತ ಚಾಲಕ ಬಾಬುವಿನ ಆತ್ಮಹತ್ಯೆ ಸೂಕ್ಷ್ಮತೆಯ ಅರಿವು ಎಲ್ಲಿ ಇರುತ್ತದೆ?. ಡೆತ್ ನೋಟ್ ನಲ್ಲಿ ಅಮಾಯಕನು ಹಿಂದೆ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಬೆಂಬಲಿಗರು ಸರ್ಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ. ನನ್ನ ಸಾವಿಗೆ ಡಾ ಕೆ.ಸುಧಾಕರ್ ಕಾರಣ ಅಂತಲೇ ಆತ ಬರೆದಿದ್ದಾನೆ. ಇದಕ್ಕೆ ಹೊಣೆ ಹೊರುತ್ತಾರೆಯೇ ಎಂದು ಸಚಿವರು ವ್ಯಂಗ್ಯವಾಗಿ ಪ್ರಶ್ನಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಅಧಿಕಾರ ಕಳೆದುಕೊಂಡಿದ್ದರ ಹತಾಶ ಭಾವನೆಯಲ್ಲಿ ಈಗಲೂ ಇದ್ದಾರೆ. ವಿಲವಿಲ ಒದ್ದಾಡುತ್ತಿರುವ ಸುಧಾಕರ್, ಅವರ ವಿರುದ್ಧ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಏನೇನು ಮಾತಾಡುತ್ತಿದ್ದಾರೆ. ಅವರ ತಪ್ಪುಗಳನ್ನು ಬಿಟ್ಟು ವಿನಾ ಕಾರಣ ಆರೋಪಗಳನ್ನು ಇತರರ ಮೇಲೆ ಹೊರಿಸುತ್ತಿದ್ದಾರೆ. ಅವರು ಅವಿವೇಕರಲ್ಲ ಅವರಿಗೆ ಮಿದುಳಿನಲ್ಲಿ ಏನೋ ಸಮಸ್ಯೆ ಇದೆ. ಇದಕ್ಕೆ ಚಿಕಿತ್ಸೆಯನ್ನು ಪಡೆಯಲಿ, ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.
ಹಿಂದೆ ಅಧಿಕಾರಿಗಳ ಮೇಲೆ ಒತ್ತಡ, ಒತ್ತುವರಿ ಜಾಗವನ್ನು ಕಿತ್ತುಕೊಳ್ಳುವ ಬ್ಲಾಕ್ ಮೇಲ್ ಮಾಡಿ ಪಕ್ಷಕ್ಕೆ ಸ್ಥಳೀಯರ ಸೇರ್ಪಡೆ, ಎದುರಾಳಿಗಳ ಮೇಲೆ ಕೇಸುಗಳನ್ನು ಹಾಕಿಸುವುದು ಸೇರಿದಂತೆ ಅಧಿಕಾರದಲ್ಲಿದ್ದಾಗ ನಾನಾ ರೀತಿಯಲ್ಲಿ ರಾಜಕಾರಣ ಮಾಡಿರುವುದರ ಬಗ್ಗೆ ಜನರಿಗೆ ಸ್ಪಷ್ಟವಾಗಿ ಗೊತ್ತಿದೆ ಎಂದು ಸಂಸದರಿಗೆ ಟಾಂಗ್ ನೀಡಿದರು.