

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ವಲಯಕ್ಕೆ ಯಾರೂ ಹೆಚ್ಚು ಆದ್ಯತೆ ನೀಡಿರಲಿಲ್ಲ. ನಾನು ಈ ಕುರಿತು ಹೆಚ್ಚು ಗಮನಹರಿಸಿದ್ದೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸ ರೈಲ್ವೆ ಯೋಜನೆ ಹಾಗೂ ಜಾರಿಯಲ್ಲಿರುವ ಕಾಮಗಾರಿಗಳ ಬಗ್ಗೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.
ಅಭಿವೃದ್ಧಿಯ ಎಂಜಿನ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಡೆಗೆ ಸಾಗುತ್ತಿದ್ದು, ಇದು ಹೊಸ ಬೆಂಗಳೂರಾಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದರು.
ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ, ಚಿಕ್ಕಬಳ್ಳಾಪುರ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ, ದೇವನಹಳ್ಳಿ-ದೊಡ್ಡಬಳ್ಳಾಪುರ-ಯಲಹಂಕ ಸೇರಿದಂತೆ 60 ಕ್ಕೂ ಅಧಿಕ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಕೆಲವು ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದ್ದು, ಈ ಕುರಿತು ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಬೆಂಗಳೂರು ಉಪನಗರ ರೈಲು ಯೋಜನೆ, ಹೊಸ ರೈಲು ಮಾರ್ಗಗಳು, ಡಬ್ಲಿಂಗ್, ವಿದ್ಯುದೀಕರಣ, ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ, ರೈಲು ನಿಲುಗಡೆ, ರೈಲು ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಕೆಲವು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಲ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಚಿವರೊಂದಿಗೆ ಚರ್ಚಿಸಲಿದ್ದೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದಿನ ಸರ್ಕಾರಗಳು ನೀಡುತ್ತಿದ್ದ ಅನುದಾನಕ್ಕಿಂತ ಏಳು ಪಟ್ಟು ಅಧಿಕ ಅನುದಾನವನ್ನು ಎನ್‌ಡಿಎ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ನೀಡಿದೆ ಎಂದರು.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಭಾಸ್ಕರ್, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
60ಕ್ಕೂ ಹೆಚ್ಚು ರೈಲ್ವೆ ಯೋಜನೆ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಹೊಸ ಯೋಜನೆಗಳ ಬಗ್ಗೆಯೂ ಎರಡೂವರೆ ತಾಸು ಸಮಗ್ರವಾಗಿ ಚರ್ಚಿಸಿದ್ದೇವೆ. ಚಿಕ್ಕಬಳ್ಳಾಪುರ ಭಾಗಕ್ಕೆ ಹೆಚ್ಚಿನ ರೈಲ್ವೆ ಸಂಪರ್ಕ ದೊರೆಯಬೇಕು. ಪ್ಯಾಸೆಂಜರ್ ರೈಲು ಮಾತ್ರವಲ್ಲ, ಗೂಡ್ಸ್ ಗೂ ರೈಲಿಗೂ ಕೂಡ ನಾನು ಒತ್ತು ಕೊಟ್ಟಿದ್ದೇನೆ. ಈ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಅಭಿವೃದ್ಧಿ ವೇಗ ಹೆಚ್ಚುತ್ತದೆ. ಚಿಕ್ಕಬಳ್ಳಾಪುರ ಭಾಗದ ಅಭಿವೃದ್ಧಿಗೆ ನೆರವಾಗುತ್ತದೆ.
-ಡಾ.ಕೆ.ಸುಧಾಕರ್, ಸಂಸದ.