ಪ್ರದೀಪ್ ಈಶ್ವರ್ ಕಾಲಿಗೆ ಬಿದ್ದು ಬಿದ್ದು ಕ್ಷಮೆ ಕೇಳುತ್ತಿದ್ದ, ಆತನನ್ನು ಕ್ಷಮಿಸಿ ತಪ್ಪು ಮಾಡಿಬಿಟ್ಟೆ

IMG_20250815_222504.jpg
Published on

ಚಿಕ್ಕಬಳ್ಳಾಪುರ: ಆತ (ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್) ಕಾಲಿಗೆ ಬಿದ್ದು ಬಿದ್ದು ಕ್ಷಮೆ ಕೇಳಿದ. ಇದಕ್ಕೆ ಆತನನ್ನು ಬಿಟ್ಟು ಬಿಟ್ಟೆ. ಆದರೆ, ಇದೇ ನಾನು ಮಾಡಿದ ತಪ್ಪು. ನನ್ನ ತಂಟೆಗೆ ಬಂದರೆ ರಾಜಕೀಯವಾಗಿಯೇ ಪಾಠ ಕಲಿಸುತ್ತೇನೆ ಎಂದು ಸಂಸದ ಡಾ ಕೆ.ಸುಧಾಕರ್ ಗುಡುಗಿದರು.
ಗೃಹ ಕಚೇರಿಯಲ್ಲಿ ಪ್ರದೀಪ್ ಈಶ್ವರ್ ಹೇಳಿದ ಹಳೇ ವಿಡಿಯೋಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಸುಮ್ಮನೆ ಆತನ ಬಗ್ಗೆ ಮಾತನಾಡಬಾರದು ಎಂದು ಹಿಂದೆ ಹೋಗುತ್ತಿದ್ದೆ, ಆದರೂ ತಂಟೆಗೆ ಬರುತ್ತಿದ್ದಾನೆ. ಎಲ್ಲದಕ್ಕೂ ಕಾಲವೇ ಉತ್ತರ ಹೇಳುತ್ತದೆ ಎಂದು ಕಿಡಿಕಾರಿದರು.
ಜಿಲ್ಲಾಡಳಿತ ಭವನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕ ಬಾಬುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ನಿಜವಾದ ಕಾಂಗ್ರೆಸ್‌ ಕಾರ್ಯಕರ್ತರು ಹೋಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿಲ್ಲ. ಆದರೆ, ಶಾಸಕರ ಹಿಂಬಾಲಕರು ಯತ್ನಿಸಿದ್ದಾರೆ. ಮೃತನ ಹೆಂಡತಿ ದೂರು ನೀಡಲು ಹೋದಾಗ, ಡೆತ್‌ನೋಟ್‌ನಲ್ಲಿರುವುದನ್ನೇ ಬರೆದುಕೊಡಲು ಪಿಎಸ್‌ಐ ಶರಣಪ್ಪ ಸೂಚಿಸಿದ್ದಾರೆ. ಒತ್ತಡಕ್ಕೆ ಮಣಿದು ನನ್ನ ಹೆಸರು ಸೇರಿಸಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆ ಮಾಡಿ ಮೊದಲು ಮೃತನಿಗೂ ನನಗೂ ಸಂಬಂಧ ಇದೆಯೇ? ಎನ್ನುವುದರ ವಿಚಾರಣೆ ಮಾಡಬೇಕಿತ್ತು. ಇದನ್ನು ಬಿಟ್ಟು ಎಫ್‌ಐಆರ್‌ ದಾಖಲಿಸಿ, ಎ1 ಆರೋಪಿಯನ್ನಾಗಿಸಲಾಗಿದೆ. ಜತೆಗೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ಸಂಸದ ಡಾ ಕೆ.ಸುಧಾಕರ್‌ ಬೇಸರಿಸಿದರು.
ಬಾಬುವಿನ ಆತ್ಮಹತ್ಯೆ ಪ್ರಕರಣದಲ್ಲಿ ಜಾತಿ ನಿಂದನೆ ಮಾಡದಿದ್ದರೂ ಹಾಗೂ ಸಂತ್ರಸ್ಥನನ್ನು ನೇರವಾಗಿ ಭೇಟಿಯಾಗದಿದ್ದರೂ ಅಟ್ರಾಸಿಟಿ ಪ್ರಕರಣ ದಾಖಲಿಸಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

*ಪೋಸ್ಟರ್‌ ವಾರ್‌*
ಕ್ಷೇತ್ರದಲ್ಲಿ ಅಪಪ್ರಚಾರದ ಪೋಸ್ಟರ್‌ ಗಳನ್ನು ಶಾಸಕರ ಬೆಂಬಲಿಗರು ಅಂಟಿಸುತ್ತಿರುವುದರ ಬಗ್ಗೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಲಾಯಿತು. ಹಾಗೆಯೇ ಸ್ಥಳೀಯ ಮುಖಂಡರಿಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಸಾಕ್ಷಿ ಸಮೇತ ಹಿಡಿದುಕೊಂಡಿದ್ದಾರೆ. ಇದೇ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದರ ಬಗ್ಗೆ ದಲಿತ ಮುಖಂಡ ಮುನಿರಾಜು ದೂರು ಸಲ್ಲಿಸಿದರೂ ಸಹ ಪೊಲೀಸರು ಮಾತ್ರ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಲಿಲ್ಲ. ಸ್ಥಳೀಯ ಶಾಸಕರು ಹಾಗೂ ಬೆಂಬಲಿಗರು ಪೋಸ್ಟರ್‌ಗಳನ್ನು ತಯಾರಿಸಿದ್ದಾರೆ ಎಂದು ಸಂಸದರು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net