

ಚಿಕ್ಕಬಳ್ಳಾಪುರ: ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳೊಂದಿಗೆ ಏಕಚಕ್ರಾಧಿಪತ್ಯ ಮೆರೆಯುವುದರ ಮೂಲಕ ಬಿಜೆಪಿ ಸತತ ಎರಡನೇ ಭರ್ಜರಿ ಗೆಲುವನ್ನು ಕಂಡಿದ್ದು ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟಿದ್ದ ಡಾ ಕೆ.ಸುಧಾಕರ್, ಮೊದಲ ಬಾರಿಗೆ ಸಂಸದರಾಗಿ ಸಂಸತ್ತಿನ ಮೆಟ್ಟಿಲೇರುತ್ತಿದ್ದಾರೆ.
ಹೌದು! ಗ್ಯಾರಂಟಿ ಯೋಜನೆಗಳ ಹುರುಪಿನಲ್ಲಿ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್‌ಗೆ ಕಣದಲ್ಲಿ ಮಣ್ಣು ಮುಕ್ಕಿಸಿ, ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಚಿವದ್ವಯರು, ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಶಾಸಕರು ಮತ್ತು ದೊಡ್ಡ ಪ್ರಮಾಣದಲ್ಲಿ ವೋಟ್ ಬ್ಯಾಂಕ್ ಹೊಂದಿರುವ ಕೈ ನಲುಗಿ ಹೋಗಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿಯ ಲೆಕ್ಕಾಚಾರದಲ್ಲಿ ಸಮಬಲ ಕಂಡು ಬಂದಿದೆ. ಗೆಲುವಿನ ಮತಗಳ ಅಂತರ ಕಡಿಮೆ ಎಂಬ ವಿಶ್ಲೇಷಣೆಯನ್ನು ಬಿಜೆಪಿ ತಲೆ ಕೆಳಗಾಗಿಸಿದೆ. ಬರೋಬ್ಬರಿ 1,63,460 ಮತಗಳ ಅಂತರದೊಂದಿಗೆ ಗೆಲುವನ್ನು ಸಾಧಿಸಿದೆ.
* ಮೆಟ್ಟಿಲು ಹತ್ತಿಸುವುದಿಲ್ಲ ಎಂದಿದ್ದ ಎಂಎಲ್‌ಎ
ಯಾವುದೇ ಕಾರಣಕ್ಕೂ ಸುಧಾಕರ್‌ರನ್ನು ಗೆಲ್ಲಲು ಬಿಡುವುದಿಲ್ಲ. ಸಂಸತ್ತಿನ ಮೆಟ್ಟಿಲನ್ನು ಹತ್ತಲು ಬಿಡುವುದಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಅವರು ಒಂದು ಮತ ಲೀಡ್ ಪಡೆದರೂ ರಾಜೀನಾಮೆ ನೀಡುವುದಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದರು.
* ಮೋದಿ, ಜೆಡಿಎಸ್ ಮೈತ್ರಿ ಬಲ
ಪ್ರಾರಂಭದಲ್ಲಿ ಕ್ಷೇತ್ರದಲ್ಲಿ ಕಮಲ ಪಾಳಯದಲ್ಲಿ ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೃಹತ್ ಸಮಾವೇಶವು ಅಭ್ಯರ್ಥಿಯ ಬಲವನ್ನು ಹೆಚ್ಚಿಸಿತು. ಸ್ವಪಕ್ಷೀಯವಾಗಿ ಮುನಿಸಿಕೊಂಡವರು ಮನಸ್ಸಿಲ್ಲದಿದ್ದರೂ ಮೇಲ್ನೋಟಕ್ಕೆ ಪಕ್ಷದ ಗೆಲುವಿಗಾಗಿ ಶ್ರಮಿಸಿದರು. ಇದರ ನಡುವೆ ಜೆಡಿಎಸ್ ಮೈತ್ರಿ ಬಲವು ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆಯಂತೆ ದಳಪತಿಗಳು ಬಲವನ್ನು ತುಂಬಿದ್ದು ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ಲು