

ಚಿಕ್ಕಬಳ್ಳಾಪುರ: ಜಿಲ್ಲಾ ಪೊಲೀಸ್ ಇಲಾಖೆಯು 12 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 9,50,850 ರೂ ಮವಲ್ಯದ 24 ಕೆ.ಜಿ 750 ಗ್ರಾಂ ಗಾಂಜಾವನ್ನು ನಿಯಮಾನುಸಾರ ನಾಶಪಡಿಸಿದೆ.
ವಿವಿಧೆಡೆ ಕಾರ್ಯಾಚರಣೆ ಕೈಗೊಂಡು ಅಕ್ರಮವಾಗಿ ದಾಸ್ತಾನಿಟ್ಟಿದ್ದ ಮಾದಕ ವಸ್ತುವನ್ನು ವಶಪಡಿಸಿಕೊಂಡು, ಎನ್ಡಿಪಿಎಸ್ ಕಾಯ್ದೆ 1985 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹಾಗೆಯೇ ಪರಿಸರ ಇಲಾಖೆಯ ಅನುಮತಿ ಪಡೆದು, ಮಾಲಿನ್ಯ ಉಂಟಾಗದAತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕೈಗಾರಿಕಾ ಪ್ರದೇಶದಲ್ಲಿ ನಾಶಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಮಾದಕ ವಸ್ತುಗಳ ಸೇವನೆಯಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಾಂತರ ಜನರು ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥö್ಯ ಹಾಳಾಗುತ್ತಿರುವುದರ ಜತೆಗೆ ಅಪರಾಧ ಚಟುವಟಿಕೆಯು ಹೆಚ್ಚಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂ.26 ರಂದು ಮಾದಕ ದ್ರವ್ಯ ವಿರೋಧಿ ದಿನ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ನಿರಂತರ ಕಾರ್ಯಾಚರಣೆ ಕೈಗೊಂಡು ಅಕ್ರಮ ಮಾಲನ್ನು ಮತ್ತು ಆರೋಪಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಇಮಾಮ್ ಖಾಸೀಂ, ಡಿವೈಎಸ್ಪಿ ಆರ್.ಶಿವಕುಮಾರ್ ಮತ್ತಿತರರು ಇದ್ದರು.
*ವಿವಿಧೆಡೆ ಪ್ರಕರಣಗಳು
ಜಿಲ್ಲೆಯ ಚಿಕ್ಕಬಳ್ಳಾಪುರ ನಗರದ ಗಾಣಿಗರ ಬೀದಿಯಲ್ಲಿ 8 ಕೆ.ಜಿ. 400 ಗ್ರಾಂ ಗಾಂಜಾ, ಚಿಂತಾಮಣಿ ತಾಲೂಕಿನ ಮುತ್ತುಕದಹಳ್ಳಿಯಲ್ಲಿ 4 ಕೆ.ಜಿ. 900 ಗ್ರಾಂ ಗಾಂಜಾ, ಬಟ್ಲಹಳ್ಳಿಯಲ್ಲಿ 750 ಗ್ರಾಂ, ಇನ್ನೂ ಬಾಗೇಪಲ್ಲಿಯಲ್ಲಿ 20 ಕೆ.ಜಿ.250 ಗ್ರಾಂ ಗಾಂಜಾ ಸೇರಿದಂತೆ ವಿವಿಧೆಡೆ ಮಾದಕವನ್ನು ವಶಪಡಿಸಿಕೊಳ್ಳಲಾಗಿದೆ.