

ಚಿಕ್ಕಬಳ್ಳಾಪುರ: ಅಕ್ರಮ ಮದ್ಯ ಸಾಗಣೆ ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡು 362 (ಜುಲೈನಿಂದ ನವೆಂಬರ್‌ವರೆಗೆ) ಪ್ರಕರಣಗಳನ್ನು ದಾಖಲಿಸಿ, ಮಾಲು ವಶಪಡಿಸಿಕೊಳ್ಳಲಾಗಿದೆ. ಆದರೂ ಆಂಧ್ರದಗಡಿ ಭಾಗದಲ್ಲಿರುವ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಣೆ, ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ.
ಗ್ರಾಮೀಣ ಭಾಗದಲ್ಲಿನ ಚಿಲ್ಲರೆ ಮತ್ತು ದಿನಸಿ ಅಂಗಡಿಗಳು ಸಣ್ಣ ಬಾರುಗಳಾಗಿ ವ್ಯವಹಾರ ಮಾಡುತ್ತಿವೆ. ನಿರಂತರ ಕಾರ್ಯಾಚರಣೆಯ ನಡುವೆಯೂ ಅಕ್ರಮ ವ್ಯವಹಾರ ಮಾತ್ರ ನಿಂತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.
ಜುಲೈನಿಂದ ದಾಳಿ ಪ್ರಕರಣಗಳು
ಅಬಕಾರಿ ಇಲಾಖೆಯಿಂದ 445 ಕಾರ್ಯಾಚರಣೆ ಕೈಗೊಂಡಿದ್ದು, ಈ ಸಂದರ್ಭದಲ್ಲಿ 13 ಘೋರ, 2 ಎನ್‌ಡಿಪಿ ಸೇರಿ 362 ಪ್ರಕರಣಗಳು ವರದಿಯಾಗಿವೆ. ಜುಲೈನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಳಿಗಳಾಗಿವೆ. ಕಳೆದ 5 ತಿಂಗಳಲ್ಲಿ ಸರಾಸರಿ 85 ದಾಳಿಗಳು ಮಾಹೆಯಾನ ನಡೆದಿವೆ. 274 ಜನರನ್ನು ಬಂಧಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ನಿರಂತರ ದಾಳಿಗಳ ಹಿನ್ನೆಲೆಯಲ್ಲಿ 104.540 ಲೀಟರ್ ಮದ್ಯ, 7,650 ಲೀಟರ್ ಸೇಂದಿ, 16 ಹಸಿ ಗಾಂಜಾ ಗಿಡಗಳನ್ನು ಮತ್ತು ಅಕ್ರಮ ವ್ಯವಹಾರಕ್ಕೆ ಬಳಸಿದ 10 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವರ್ಷಾಂತ್ಯದಲ್ಲಿ ಲಾಭ ಅಧಿಕ
ಸಾಮಾನ್ಯವಾಗಿ ವರ್ಷಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುವುದು ವಾಡಿಕೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯ ಹಬ್ಬಗಳ ಆಚರಣೆ, ಹೊಸವರ್ಷ ಆರಂಭ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ವಿವಿಧೆಡೆ ಪಾರ್ಟಿ, ಸಮಾರಂಭಗಳು ಆಯೋಜನೆಗೊಳ್ಳುತ್ತವೆ. ವಿವಿಧ ಪ್ರವಾಸಿ ತಾಣಗಳಿಗೆ ಸರಣಿ ರಜೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಇದು ಮೋಜು-ಮಸ್ತಿ ಜತೆಗೆ ಮದ್ಯ ಸೇವನೆಯ ಚಟುವಟಿಕೆಯಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂದೇಳಲಾಗುತ್ತಿದೆ.
ರಾಜಸ್ವ ಸಂಗ್ರಹಣೆ
ಗುಣಮಟ್ಟದ ಮದ್ಯ ಒದಗಿಸುವುದು ಮತ್ತು ಅನಧಿಕೃತ ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯ ಮತ್ತು ಪ್ರಾಣ ಹಾನಿ ತಪ್ಪಿಸುವುದು, ಕಾಯ್ದೆ ಉಲ್ಲಂಘನೆಗೆ ಅವಕಾಶ ನೀಡದಿರುವುದು ಹಾಗೂ ನಿರಂತರ ಪರಿಶೀಲನೆ, ತಪ್ಪಿತಸ್ಥರ ಪತ್ತೆ ಸೇರಿ ವಿವಿಧ ಚಟುವಟಿಕೆಯನ್ನು ಅಬಕಾರಿ ಇಲಾಖೆ ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಆದಾಯವು ಈ ಕ್ಷೇತ್ರದಿಂದ ಗಳಿಕೆಯಾಗುತ್ತಿದೆ. ರಾಜ್ಯದಲ್ಲಿ ಕಳೆದ 2022-23ನೇ ಸಾಲಿನಲ್ಲಿ 29,920 ಕೋಟಿ ರೂ, 2023-24ನೇ ಸಾಲಿನಲ್ಲಿ 34,628 ಕೋಟಿ ರೂ. ರಾಜಸ್ವ ಸಂಗ್ರಹವಾಗಿದ್ದು, ಪ್ರಸಕ್ತ 2024-25ನೇ ಸಾಲಿನಲ್ಲಿ 38,525 ಕೋಟಿ ರೂ. ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ. ಅದರಂತೆ ಜಿಲ್ಲೆಯಿಂದಲೂ ಹೆಚ್ಚಿನ ಆದಾಯ ಲಭಿಸುತ್ತಿದೆ. ಅಬಕಾರಿ ಇಲಾಖೆಗೆ ಕಳೆದ ಐದು ತಿಂಗಳಲ್ಲಿ 817.31 ಕೋಟಿ ರೂ. ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಯಮ ಉಲ್ಲಂಘನೆ ಹೆಚ್ಚು
ಮದ್ಯ ಸೇವನೆಯು ಪ್ರಾಣಕ್ಕೆ ಹಾನಿಕಾರಕ. ಒಂದೆಡೆ ಹೆಚ್ಚಿನ ಮಾರಾಟದ ಸಾಧನೆಯ ಗುರಿ, ಮತ್ತೊಂದೆಡೆ ದುಶ್ಚಟಗಳಿಂದ ಜಾಗೃತಿ ಮೂಡಿಸುವ ಕೆಲಸಗಳಾಗುತ್ತಿವೆ. ಇನ್ನು ಮುಖ್ಯವಾಗಿ ದಂಧೆಕೋರರು ಹೆಚ್ಚಿನ ಆದಾಯ ಗಳಿಕೆಗಾಗಿ ನಿಯಮ ಉಲ್ಲಂಘಿಸುತ್ತಿದ್ದಾರೆ. ದಾಸ್ತಾನು ಪ್ರಮಾಣದ ಸುಳ್ಳು ಲೆಕ್ಕ, ಅನಧಿಕೃತ ದರ ನಿಗದಿ, ಕಲಬೆರಕೆ ಮೂಲಕ ಕಳಪೆ ಗುಣಮಟ್ಟದ ಉತ್ಪನ್ನಗಳ ಮಾರಾಟ ಪ್ರಕರಣಗಳು ಹೆಚ್ಚು. ಆಗಾಗ ಅಕ್ರಮವಾಗಿ ಸಾಗಣೆಯ ವೇಳೆ ಅಪಾರ ಪ್ರಮಾಣದ ಮಾಲು ಮತ್ತು ಆರೋಪಿಗಳು ಸಿಕ್ಕಿ ಬೀಳುತ್ತಿದ್ದಾರೆ.