

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆ ಹಾನಿಗೊಳಗಾದ ಯಾವುದೇ ಸಂತ್ರಸ್ತರು ವಿಪತ್ತು ಪರಿಹಾರದಿಂದ ವಂಚಿತರಾಗದಂತೆ ಸೂಕ್ತ ಕ್ರಮ ಕೈಗೊಳ್ಳವಂತೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಕೈಗೊಂಡಿದ್ದ ಅತಿವೃಷ್ಟಿಯಿಂದ ಉಂಟಾದ ಬೆಳೆ ಮತ್ತು ಮನೆ ಹಾನಿಗೆ ಪರಿಹಾರ ನೀಡುವ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಅ.1 ರಿಂದ ನ.21ರವರೆಗೆ ಅತಿವೃಷ್ಟಿಯಿಂದಾಗಿ ಬೆಳೆ ಮತ್ತು ಮನೆ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನ.30ರ ಒಳಗೆ ಪರಿಹಾರ್ ಪೋರ್ಟಲ್ ತಂತ್ರಾಂಶ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (ಆರ್‌ಜಿಎಚ್‌ಸಿಎಲ್) ವತಿಯಿಂದ ಅಭಿವೃದ್ಧಿ ಪಡಿಸಲಾದ ತಂತ್ರಾಂಶದಲ್ಲಿ ದತ್ತಾಂಶವನ್ನು ನಮೂದಿಸಬೇಕು ಎಂದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಲೋಕೋಪಯೋಗಿ, ಪಿಆರ್‌ಇಡಿ ಹಾಗೂ ಸೇರಿ ಇತರ ಇಲಾಖೆಗಳು ಜಂಟಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ. ಸಂತ್ರಸ್ತರು ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದರು.
ಹಣದ ಕೊರತೆ ಇಲ್ಲ, ಪರಿಹಾರ ಲೆಕ್ಕ: ಹಾನಿಯಾಗಿರುವ ಮನೆಗಳ ಜಂಟಿ ಸಮೀಕ್ಷೆ ಮಾಹಿತಿಯನ್ನು ಪರಿಹಾರ್ ಪೋರ್ಟಲ್ ನಲ್ಲಿ ನಮೂದಿಸಲಿದ್ದು ಇದನ್ನು ಪರಿಶೀಲಿಸಿ ಎ ಮತ್ತು ಬಿ ವರ್ಗದ ಮನೆಗಳ ಮಾಲೀಕರಿಗೆ 95,100 ರೂ, ಸಿ ವರ್ಗದ ಮನೆಗಳ ಮಾಲೀಕರಿಗೆ 50 ಸಾವಿರ ರೂ. ಹಾಗೂ ಪ್ರವಾಹದಿಂದ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳ ಹಾನಿಗೆ 10 ಸಾವಿರ ರೂ. ತುರ್ತು ಪರಿಹಾರವನ್ನು ಸಂತ್ರಸ್ತರಿಗೆ ನೇರವಾಗಿ ವಿತರಿಸಲಾಗುತ್ತದೆ. ಮೊದಲನೇ ಕಂತಿನ ಭಾಗವಾಗಿ 95,100 ರೂ ಪರಿಹಾರವನ್ನು ಪಡೆದ ಎ ಮತ್ತು ಬಿ ವರ್ಗದ ಮನೆಗಳ ಮಾಲೀಕರಿಗೆ ಉಳಿಕೆ ಪರಿಹಾರವನ್ನು ಹಂತ ಹಂತವಾಗಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ತಂತ್ರಾಂಶದ ಮೂಲಕ ಸಂಬಂಧಪಟ್ಟ ಸಂತ್ರಸ್ತರಿಗೆ ನೇರವಾಗಿ ಡಿಬಿಟಿ ಮಾಡಲಾಗುತ್ತದೆ.
ಹಾನಿಯ ಲೆಕ್ಕಾಚಾರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾದ ಶೇ.50 ರಷ್ಟು ಕೃಷಿ ಮತ್ತು ತೋಟಗಾರಿಕೆಯ ವಿವಿಧ ಬೆಳೆಗಳು ಹಾನಿಯಾಗಿವೆ. 1,250 ಮನೆಗಳು, 490 ಶಾಲೆಗಳ 950 ಕೊಠಡಿಗಳು, 449 ಅಂಗನವಾಡಿ ಕೇಂದ್ರಗಳು, 448 ವಿದ್ಯುತ್ ಕಂಬಗಳು, 41 ಟ್ರಾನ್ಸ್‌ಫಾರ್ಮರ್‌ಗಳು, ಅಂದಾಜು 300 ಕಿಲೋಮೀಟರ್ ಉದ್ದದ ವಿವಿಧ ರಸ್ತೆಗಳು, 13 ಸೇತುವೆಗಳು, 22 ಸಾರ್ವಜನಿಕ ಕಾಮಗಾರಿಗಳು ಹಾನಿಗೆ ಒಳಗಾಗಿವೆ. ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು 5 ಹಸುಗಳು, 52 ಕುರಿ ಮೇಕೆಗಳು ಅತಿವೃಷ್ಟಿಗೆ ಬಲಿಯಾಗಿವೆ.
ನೋಡಲ್ ಅಧಿಕಾರಿಗಳ ನೇಮಕ: ಬೆಳೆ ಮತ್ತು ಮನೆ ಹಾನಿ ಹಾಗೂ ಯಾವುದೇ ರೀತಿಯ ಹಾನಿಗಳ ಬಗ್ಗೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳ ಮೇಲುಸ್ತುವಾರಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾಮಟ್ಟದ ನೋಡಲ್ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಚಿಕ್ಕಬಳ್ಳಾಪುರಕ್ಕೆ ಜಿಪಂ ಉಪಕಾರ್ಯದರ್ಶಿ, ಚಿಂತಾಮಣಿಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ, ಶಿಡ್ಲಘಟ್ಟಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ, ಗೌರಿಬಿದನೂರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ಬಾಗೇಪಲ್ಲಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ (ಆಶ್ರಯ) ಯೋಜನಾ ನಿರ್ದೇಶಕಿ, ಗುಡಿಬಂಡೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿಯನ್ನು ನೇಮಿಸಲಾಗಿದೆ.