

ಚಿಕ್ಕಬಳ್ಳಾಪುರ: ಸದ್ಗುರು ಶ್ರೀ ಮಧುಸೂದನ ಸಾಯಿ 43ನೇ ಜನ್ಮದಿನ ಉತ್ಸವದ ಅಂಗವಾಗಿ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಜು.26ರವರೆಗೆ ಪ್ರತಿನಿತ್ಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡಿರುವ ಜಾಗತಿಕ ವಿವಿಧ ಸಮ್ಮೇಳನಗಳಿಗೆ ಗುರುವಾರ ಚಾಲನೆ ನೀಡಲಾಯಿತು.
ಉನ್ನತ ಶಿಕ್ಷಣ ಎಲ್ಲರಿಗೂ ಕೈಗೆಟಕುವಂತೆ ಉದ್ದೇಶಿತ ಶಿಕ್ಷಣ ಸಮ್ಮೇಳನವು (ಜು.14ರಿಂದ ಜು.15 ರವರೆಗೆ), ವೈದ್ಯಕೀಯ ಶಿಕ್ಷಣದಲ್ಲಿ ಕರೊನಾ ಸಾಂಕ್ರಾಮಿಕ ನಂತರದ ಸುಧಾರಣೆಗಳ ಕುರಿತ ವೈದ್ಯಕೀಯ ಶಿಕ್ಷಣ ಸಮ್ಮೇಳನ (ಜು.17 ಮತ್ತು ಜು.18), ಉತ್ತಮ ಸುಭದ್ರ ಸಮಾಜಕ್ಕಾಗಿ ವೇದ ವಿಚಾರಗಳ ಕುರಿತ ಜಾಗತಿಕ ಸಮ್ಮೇಳನ (ಜು.20 ಮತ್ತು ಜು.21) ಮತ್ತು ಆಧ್ಯಾತ್ಮಿಕ ಜ್ಞಾನದ ಮೂಲಕ ಸರ್ವ ಧರ್ಮ ಸಾಮರಸ್ಯವನ್ನು ಸಾಧಿಸುವ ಜಾಗೃತಿಯ ಸರ್ವ ಧರ್ಮ ಸಮ್ಮೇಳನ (ಜು.23 ಮತ್ತು ಜು.24), ಸದ್ಗುರು ಮಧುಸೂದನ ಸಾಯಿ 43ನೇ ಜನ್ಮ ದಿನಾಚರಣೆ (ಜು.26) ನಡೆಯಲಿದೆ.
ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಉದ್ಯಮಿಗಳಾಗಲು ಅವಕಾಶಗಳನ್ನು ಸೃಷ್ಟಿಸುವಿಕೆ, ಉನ್ನತ ಶಿಕ್ಷಣದಲ್ಲಿ ಅಗತ್ಯ ಕೌಶಲ್ಯಗಳು, ಸ್ವಂತ ಮಾರ್ಗವನ್ನು ರೂಪಿಸುವಿಕೆ, ಸಾಮಾಜಿಕ ಸೇವೆಯೊಂದಿಗೆ ಉದ್ಯಮವನ್ನು ಸಂಯೋಜಿಸುವಿಕೆ, ಜೀವನ ಮೌಲ್ಯಗಳು ಮತ್ತು ಬೋಧನಾ ಮೌಲ್ಯಗಳ ನಡುವಿನ ಭಿನ್ನತೆ, ಉನ್ನತ ಶಿಕ್ಷಣದೊಂದಿಗೆ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಸಾಮಾಜಿಕ ಪ್ರಭಾವದ ಅಧ್ಯಯನ ವಿಚಾರವಾಗಿ ಚಿಂತನ ಮಂಥನ ನಡೆಯಿತು.
ಕೆನಡಾ ದೇಶದ ಪಾರ್ಲಿಮೆಂಟ್ ಸಂಸದ ಚಂದ್ರ ಆರ್ಯ, ಶ್ರೀ ಸದ್ಗುರು ಶ್ರೀ ಮಧುಸೂದನ ಸಾಯಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಮಾರ್ಗದರ್ಶಿ ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು.
ಸಂಗೀತ ಕಾರ್ಯಕ್ರಮ: ಪದ್ಮಶ್ರೀ ಪುರಸ್ಕೃತ ಪಂಡಿತ್ ಎಂ.ವೆಂಕಟೇಶ್ ಕುಮಾರ್ ನೇತೃತ್ವದ ತಂಡದಿಂದ ಪ್ರೇಮ ಸಾಗರ ಸಾಯಿರಾಂ ಸೇರಿದಂತೆ ವಿವಿಧ ಭಕ್ತಿಗೀತೆಗಳ ಗಾಯನದ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು.
ಇಂದಿನ ಕಾರ್ಯಕ್ರಮ: ಜು.15 ರಂದು ನುರಿತ ತಜ್ಞರಿಂದ ಹಕ್ಕುಗಳಿಂದ ಜವಾಬ್ದಾರಿಯತ್ತ, ಶಿಕ್ಷಣದ ಉದ್ದೇಶವನ್ನು ಸ್ಪಷ್ಟಪಡಿಸುವಿಕೆ, ಮೌಲ್ಯಾಧಾರಿತ ಅಧಿವೇಶನ ನಡೆಯಲಿದೆ. ಕಲಾವಿದರಾದ ಎಸ್.ಐಶ್ವರ್ಯ ಮತ್ತು ಎಸ್.ಸೌಂದರ್ಯ ನೇತೃತ್ವದ ತಂಡದಿಂದ ಸಂಗೀತ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.
ಮುದ್ದೇನಹಳ್ಳಿಗೆ ಕೆನಡಾ ಸಂಸದ ಭೇಟಿ
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯು ಕೆನಡಾಗಿಂತಲೂ ಉತ್ತಮ ನಿರ್ವಹಣೆ ಹೊಂದಿದೆ ಎಂದು ಕೆನಡಾ ದೇಶದ ಸಂಸದ ಚಂದ್ರ ಆರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರನ್ನು ಪ್ರೀತಿಸಿ, ಎಲ್ಲರನ್ನೂ ಸತ್ಕರಿಸು ಎಂಬ ಸತ್ಯಸಾಯಿ ಬಾಬಾರ ಸಂದೇಶದಂತೆ ಇಲ್ಲಿ ಸಾಮಾಜಿಕ ಸೇವಾ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ. ಒಳ್ಳೆಯ ವಾತಾವರಣದಲ್ಲಿ ಅನೇಕ ಮಕ್ಕಳು ಆಧ್ಯಾತ್ಮಿಕ, ವೈಜ್ಞಾನಿಕ, ಮಾನವೀಯ ಮೌಲ್ಯಯುತ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು ಗೋವು ಸಾಕಣೆ, ಆರೋಗ್ಯ ಮತ್ತು ಶೈಕ್ಷಣಿಕ ವ್ಯವಸ್ಥೆಯು ಎಲ್ಲರ ಮೆಚ್ಚುಗೆಗೆ ಅರ್ಹರಾಗುವ ರೀತಿಯಲ್ಲಿ ಕಂಡು ಬರುತ್ತಿದೆ ಎಂದರು. ಈ ಸಂದರ್ಭದಲ್ಲಿ ಚಂದ್ರ ಆರ್ಯರ ಪತ್ನಿ ಸಂಗೀತ ಆರ್ಯ, ಕೌಶಲ ಆಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಕಲ್ಪನಾ ಮುರಳೀಧರ್ ಮತ್ತಿತರರು ಇದ್ದರು.
ಸದ್ಗುರು ಜತೆ ಸಂಸದರ ಚರ್ಚೆ: ಕೆನಡಾ ಸಂಸದರಾಗಿ ಮೂರನೇ ಬಾರಿಗೆ ಆಯ್ಕೆಯಾಗಿರುವುದರ ಜತೆಗೆ ಇತ್ತೀಚೆಗೆ ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದ ತುಮಕೂರು ಮೂಲದ ಚಂದ್ರ ಆರ್ಯ ಮುದ್ದೇನಹಳ್ಳಿಯಲ್ಲಿನ ಗೋಶಾಲೆ, ವೇದಿಕ್ ಗುರುಕುಲಂ ಹಾಗೂ ಶೈಕ್ಷಣಿಕ ಮತ್ತು ವೈದ್ಯಕೀಯ ಕೇಂದ್ರಗಳನ್ನು ವೀಕ್ಷಿಸಿದರು. ಸತ್ಯಸಾಯಿ ಗ್ರಾಮದ ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಪತಿ ನರಸಿಂಹಮೂರ್ತಿ ಅವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು.