

ಬಾಗೇಪಲ್ಲಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ವಿತರಿಸಿರುವ ಬಸ್‌ಪಾಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಮಕ್ಕಳು ಶಾಲಾ-ಕಾಲೇಜಿಗೆ ಹೋಗಿ ಬರಲು ಹರಸಾಹಸಪಡುವಂತಾಗಿದೆ.
ಬಾಗೇಪಲ್ಲಿ ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ಸೇರಿ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ಸರಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಈ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಿಯಾಯಿತಿ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವಂತೆ ಸಾರಿಗೆ ಸಂಸ್ಥೆ ಇಲಾಖೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಂತೆ ಬಾಗೇಪಲ್ಲಿ ಪಟ್ಟಣದಿಂದ 65 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳ ಬಸ್ ಮಾರ್ಗಗಳಲ್ಲಿ ಪ್ರಯಾಣಿಸಲು ಒಬ್ಬ ವಿದ್ಯಾರ್ಥಿಯಿಂದ 1,150 ರೂ. ಶುಲ್ಕ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡಲಾಗಿದೆ. ಆದರೆ ಕಾಲೇಜು ಸಮಯದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಬಂದು ಬಸ್‌ಗಾಗಿ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ಹತ್ತಿಸದ ನಿರ್ವಾಹಕರು: ಟಿಕೆಟ್ ಖರೀದಿಸುವವರು ವಿದ್ಯಾರ್ಥಿಗಳಿರುವ ಬಸ್‌ಗಳಲ್ಲಿ ಪ್ರಯಾಣಿಸುವುದಿಲ್ಲ, ಡಿಪೋ ವ್ಯವಸ್ಥಾಪಕರು ನಿಗದಿಪಡಿಸಿರುವ ಕಲೆಕ್ಷನ್ ಟಾರ್ಗೆಟ್ ಮುಟ್ಟಲು ಸಾಧ್ಯವಾಗುವುದಿಲ್ಲ ಎಂದು ನೆಪ ಹೇಳಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಮಾರ್ಗಗಳಲ್ಲಿ ಸಂಚರಿಸುವ ಬಹುತೇಕ ಬಸ್‌ಗಳ ನಿರ್ವಾಹಕರು ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಲು ಬಿಡುತ್ತಿಲ್ಲ. ಒಂದು ವೇಳೆ ಬಸ್ ಹತ್ತಲು ನಿರ್ವಾಹಕರು ಒಪ್ಪಿದರೂ ಬಸ್ಸಿನ ಸೀಟುಗಳು ಸಂಪೂರ್ಣ ಭರ್ತಿ ಆದ ನಂತರ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಾರೆ. ಬಸ್‌ಪಾಸ್ ಹೊಂದಿದ್ದರೂ ವಿದ್ಯಾರ್ಥಿಗಳು ನೆಮ್ಮದಿಯಾಗಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಲು ಹರಸಾಹಸಪಡಬೇಕಾಗಿದೆ.
ಬಸ್‌ಪಾಸ್ ಹೊಂದಿದ್ದರೂ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ಸಮ್ಮುಖದಲ್ಲೇ ಅವಹೇಳನವಾಗಿ ಮಾತನಾಡುತ್ತಾರೆ. ಪ್ರಯಾಣಿಸಲು ಅವಕಾಶ ಇಲ್ಲದ ಮೇಲೆ ಪಾಸ್ ಏಕೆ ವಿತರಿಸಬೇಕು? ಇಲಾಖೆ ಮೇಲಧಿಕಾರಿಗಳು ಸಮಸ್ಯೆ ಬಗ್ಗೆ ಗಮನಹರಿಸಿ ಇತ್ಯರ್ಥಕ್ಕೆ ಮುಂದಾಗಬೇಕು.
ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ