ಮರುಕಳಿಸಿದ ನಂದಿ ಬಸಪ್ಪನ ವೈಭವ: ನಾಲ್ಕು ವರ್ಷದ ನಂತರ ಕಳೆಗಟ್ಟಿದ ಚಿಕ್ಕಂಕನಹಳ್ಳಿ ಜಾತ್ರೆ

Chikankanahalli Jathre Mandya
Published on

ಎಂ.ಪಿ.ವೆಂಕಟೇಶ್ ಮದ್ದೂರು
ಬರೋಬರಿ ನಾಲ್ಕು ವರ್ಷದ ಬಳಿಕ ತಾಲೂಕಿನ ಆತಗೂರು ಹೋಬಳಿಯ ಚಿಕ್ಕಂಕನಹಳ್ಳಿಯ ಶ್ರೀ ನಂದಿ ಬಸವೇಶ್ವರಸ್ವಾಮಿಯ ವೈಭವ ಮರುಕಳಿಸಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ದಾಂಗುಡಿ ಇಡುತ್ತಿದ್ದಾರೆ. ಮತ್ತೊಂದೆಡೆ ಕ್ಷೇತ್ರದ ತುಂಬೆಲ್ಲ ರಾಸುಗಳೇ ತುಂಬಿಕೊಂಡಿವೆ.
ನಂದಿ ಬಸವೇಶ್ವರ ಜಾತ್ರೆ ನೂರಾರು ವರ್ಷದ ಇತಿಹಾಸ ಹೊಂದಿದೆ. ಗ್ರಾಮದ ಹೊರಗಿನ ಕಾನನ ನಡುವೆ ಇರುವ ದೇವಸ್ಥಾನದ ಸುತ್ತಲೂ ನಡೆಯುವ ಜಾತ್ರೆಗೆ ಹಲವು ಜಿಲ್ಲೆಗಳಿಂದ ರಾಸುಗಳು ಬರುತ್ತಿದ್ದವು. ಆದರೆ ಕೋವಿಡ್ ಹಾಗೂ ಚರ್ಮಗಂಟು ರೋಗದಿಂದ ನಾಲ್ಕು ವರ್ಷ ಜಾತ್ರೆ ನಿಂತಿತ್ತು. ಇದರಿಂದಾಗಿ ಚಿಕ್ಕಂಕನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಆತಂಕವಿತ್ತು. ಆದರೆ ಈ ವರ್ಷ ಮತ್ತೆ ಜಾತ್ರೆ ಕಳೆಗಟ್ಟಿದೆ.
ಕಣ್ಣಾಯಿಸಿದಲೆಲ್ಲ ರಾಸುಗಳು: ಈ ಜಾತ್ರೆಯಲ್ಲಿ ರಾಸುಗಳೇ ಪ್ರಮುಖವಾಗಿವೆ. ರಾಸುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ರೈತರು ಆಗಮಿಸುತ್ತಾರೆ. ಕನಿಷ್ಟ ಒಂದೂವರೆ ಲಕ್ಷ ರೂನಿಂದ ಹಿಡಿದು ಮೂರು ಲಕ್ಷ ರೂ, ಅದಕ್ಕೂ ಹೆಚ್ಚಿನ ದರದ ರಾಸುಗಳ ಮಾರಾಟ ನಡೆಯುತ್ತಿದೆ. ಈ ಬಾರಿ ಐದು ಸಾವಿರಕ್ಕೂ ಹೆಚ್ಚು ರಾಸುಗಳು ಆಗಮಿಸಿವೆ. ಹಿಂದೆಲ್ಲ ಜಾತ್ರೆ ಸಮಯದಲ್ಲಿ ನಾಲೆಯಲ್ಲಿ ನೀರು ಹರಿಯುತ್ತಿತ್ತು. ಆದರೆ ಈ ಬಾರಿ ನೀರಿಲ್ಲದಿರುವುದು ಬೇಸರಕ್ಕೆ ಕಾರಣವಾಗಿದೆ. ಇನ್ನು ಪ್ರತಿ ಬಾರಿ ಉತ್ತಮ ರಾಸುಗಳಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಈ ಸಲವೂ ಪ್ರಶಸ್ತಿ ನೀಡುವ ಘೋಷಣೆ ಮಾಡಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎನ್ನುವ ಅನುಮಾನ ರೈತರನ್ನು ಕಾಡುತ್ತಿದೆ.
ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ನಾಲ್ಕು ವರ್ಷದ ಬಳಿಕ ನಡೆಯುತ್ತಿರುವುದರಿಂದ ಪ್ರತಿನಿತ್ಯ ಸಾವಿರಾರೂ ಜನರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಮಕ್ಕಳ ಆಟದ ಸಾಮಗ್ರಿ, ಐಸ್ ಕ್ರೀಂ ಮಾರಾಟ, ಹೋಟೆಲ್‌ಗಳನ್ನು ತೆರೆಯಲಾಗಿದೆ. ಇದಲ್ಲದೆ ಕಡ್ಲೆಪುರಿ, ಪೂಜಾ ಸಾಮಗ್ರಿಗಳ ವ್ಯಾಪಾರವೂ ಜೋರಾಗಿದ್ದು, ಜಾತ್ರೆ ಮತ್ತೆ ಕಳೆಗಟ್ಟಿರುವುದಕ್ಕೆ ವ್ಯಾಪಾರಿಗಳು ಸಂತಸದಲ್ಲಿದ್ದಾರೆ.
ಜ.17ರಿಂದ ಜಾತ್ರಾ ಮಹೋತ್ಸವ ನಡೆಯುತ್ತಿದೆ. 20ರಂದು ಚಿತ್ರ ಮಂಟಪೋತ್ಸವ, 21ರಂದು ಮಹಾಉತ್ಸವ, 22ರಂದು ಹುಲಿವಾಹನೋತ್ಸವ, 23ರಂದು ಚಂದ್ರಮಂಡಲೋತ್ಸವ, 25ರಂದು ಅಶ್ವವಾಹನೋತ್ಸವ, 26ರಂದು ತೆಪ್ಪೋತ್ಸವ, 27ರಂದು ವೃಷಭೋತ್ಸವ, 28ರಂದು ವಸಂತೋತ್ಸವ ಮತ್ತು ಮಹಾಮಂಗಳಾರತಿ, ರಥಸಪ್ತಮಿ ಪೂಜೆ ಇರಲಿದೆ.

ನಂದಿಬೆಟ್ಟದಿಂದ ಬಂದು ನೆಲೆಸಿದ ದೈವ: ನಂದಿ ಬಸವೇಶ್ವರಸ್ವಾಮಿ ದಟ್ಟ ಕಾನನದ ನಡುವೆ ವಿರಾಜಮಾನರಂತೆ ನೆಲೆಸಿದ್ದಾರೆ. ಅಲ್ಲದೆ ಅಸಂಖ್ಯಾತ ಭಕ್ತರ ಕಷ್ಟವನ್ನು ದೂರ ಮಾಡುತ್ತಾ ಅದ್ಬುತ ಶಕ್ತಿಯಾಗಿದ್ದಾರೆ. ನಂದಿ ಬಸವೇಶ್ವರಸ್ವಾಮಿ ಭಕ್ತರಿಗಾಗಿ ಉದ್ಭವಿಸಿದ್ದಾರೆ ಎನ್ನುವ ಪ್ರಬಲ ನಂಬಿಕೆ ಇದೆ. ಇದಕ್ಕೆ ಪೂರಕವೆಂಬಂತೆ ದೇವರ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿರುವ ಬಗ್ಗೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಆದರೆ ಬಸಪ್ಪನ ಬಗ್ಗೆ ಭಕ್ತರು ಹಲವು ರೀತಿಯ ಕಥೆಗಳನ್ನು ಹೇಳುತ್ತಾರೆ. ನಂದಿ ಬಸವೇಶ್ವರಸ್ವಾಮಿ ಮೊದಲು ನಂದಿ ಬೆಟ್ಟದಲ್ಲಿ ನೆಲೆಸಿದ್ದರು. ಆದರೆ ಅಲ್ಲಿ ಅಪಚಾರವಾದ ಹಿನ್ನೆಲೆಯಲ್ಲಿ ಬೇಸತ್ತು ಬೇರೆಡೆ ನೆಲೆಸುವ ಬಗ್ಗೆ ಋಷಿಮುನಿಯ ಸಲಹೆ ಕೇಳುತ್ತಾರೆ. ಆ ವೇಳೆ ಮಲೈ ಮಹದೇಶ್ವರಸ್ವಾಮಿಯ ಸಲಹೆ ಕೇಳುವಂತೆ ಕಿವಿಮಾತು ಹೇಳುತ್ತಾರೆ.
ಅದರಂತೆ ಮಹದೇಶ್ವರಸ್ವಾಮಿ, ಚಿಕ್ಕಂಕನಹಳ್ಳಿ ಸ್ಥಳವನ್ನು ಸೂಚಿಸುತ್ತಾರೆ. ಈ ಭಾಗದಲ್ಲಿ ನೆಲೆಸಿ ರೈತಾಪಿ ಜನರ ಕಷ್ಟವನ್ನು ಬಗೆಹರಿಸುವಂತೆ ಸಲಹೆ ನೀಡುತ್ತಾರೆ. ಆನಂತರ ಸ್ಥಳಕ್ಕೆ ಹೊರಡುವ ಬಸವಣ್ಣನಿಗೆ ಹೊಟ್ಟೆ ಹಸಿವು ಹೆಚ್ಚಾಗುತ್ತದೆ. ಈ ವೇಳೆ ದಾಸರು ಜೋಳಿಗೆಯಿಂದ ಕಜ್ಜಾಯ ನೀಡುತ್ತಾರೆ. ಇದನ್ನು ಸೇವಿಸಿದ ಬಸವಣ್ಣ, ನನ್ನ ನೈವೇದ್ಯಕ್ಕೆ ಕಜ್ಜಾಯ ತರುವ ಭಕ್ತರ ಕಷ್ಟ ನನಗೆ ಇರಲಿ ಎಂದು ಹೇಳಿದರಂತೆ. ಇದಾದ ಬಳಿಕ ಚಿಕ್ಕಂಕನಹಳ್ಳಿ ಗ್ರಾಮದಲ್ಲಿ ನೆಲೆಸಿದರು. ಇನ್ನು ನಂದಿ ಬೆಟ್ಟದಿಂದ ಬಂದು ನೆಲೆಸಿದ ಪರಿಣಾಮ ‘ನಂದಿ ಬಸವಣ್ಣ’ ಎಂದು ಹೆಸರು ಬಂದಿದೆ ಎನ್ನುವ ಮಾಹಿತಿ ಇದೆ.
ರಾಸುಗಳ ಪಾಲಿನ ವೈದ್ಯ: ಜಾನುವಾರುಗಳಿಗೆ ಆರೋಗ್ಯ ಸಮಸ್ಯೆಯಾದರೆ ಇಲ್ಲಿಗೆ ಬಂದು ಪೂಜೆ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ರಾಸುಗಳು ಗುಣಮುಖವಾಗಿವೆ. ಇದಲ್ಲದೆ ಕುಟುಂಬ ಕಲಹ, ಸಂತಾನ ಸಮಸ್ಯೆ, ಮದುವೆಯಾಗದಿರುವುದು, ವ್ಯಾಪಾರದಲ್ಲಿ ಅಭಿವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಕ್ತರು ಬರುತ್ತಾರೆ. ಹರಕೆ ಹೊತ್ತು ನಿಷ್ಠೆಯಿಂದ ಪೂಜಿಸಿದರೆ ಪ್ರತಿಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಅಂತೆಯೆ, ಸಮಸ್ಯೆ ಬಗೆಹರಿದವರು ತುಪ್ಪದ ಕಜ್ಜಾಯ ಮಾಡಿ ತಂದು ದೇವರಿಗೆ ಅರ್ಪಿಸುತ್ತಾರೆ. ದೇವರ ಸನ್ನಿಧಿಯಲ್ಲಿ ಅಮಾವಾಸ್ಯೆ, ಕಾರ್ತಿಕ ಮಾಸದ ಪೂಜೆ, ನವರಾತ್ರಿ, ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ಸಂಕ್ರಾಂತಿ ಹಬ್ಬದ ಮರುದಿನ ನಡೆಯುವ ಜಾನುವಾರು ಜಾತ್ರೆ ರಾಜ್ಯದಲ್ಲಿಯೇ ಪ್ರಖ್ಯಾತಿ ಪಡೆದಿದೆ.
ಮಾರ್ಗ: ಬೆಂಗಳೂರು ಅಥವಾ ಮೈಸೂರು ಮಾರ್ಗದಿಂದ ಬರುವವರು ಮದ್ದೂರಿಗೆ ಆಗಮಿಸಿ, ಅಲ್ಲಿಂದ ಸುಮಾರು 15 ಕಿ.ಮೀ ಸಾಗಿದರೆ ಕೆಸ್ತೂರು ಸಿಗುತ್ತದೆ. ನಂತರ ಅಲ್ಲಿಂದ ಅಡಗನಹಳ್ಳಿ ಮೂಲಕ 5.6 ಕಿ.ಮೀ ಮತ್ತು ತುಮಕೂರು ಮಾರ್ಗದಿಂದ ಬರುವವರು ದುಂಡನಹಳ್ಳಿ, ಹೂತಗೆರೆ ಮೂಲಕ ಹಾಗೂ ಕೊಪ್ಪದಿಂದ ಬರುವವರು ಚಿಕ್ಕಂಕನಹಳ್ಳಿ ಮಾರ್ಗವಾಗಿ ಸಂಚರಿಸಿದರೆ ದೇವಸ್ಥಾನ ಸಿಗುತ್ತದೆ.

ನಾಲ್ಕು ವರ್ಷದಿಂದ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಎಲ್ಲ ಆತಂಕವೂ ದೂರಾಗಿ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಹಲವು ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ. ಹಿಂದಿನಂತೆಯೇ ಜಾತ್ರಾ ಮಹೋತ್ಸವ ಕಳೆಗಟ್ಟಿರುವುದು ಖುಷಿಯ ವಿಚಾರ.
ಜೆ.ಎಂ.ಕಲ್ಲೇಶ್‌ಕುಮಾರ್
ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net