

ಚಿಕ್ಕಜಾಜೂರು: ಲಾಕ್‌ಡೌನ್ ಸಂಕಷ್ಟದಲ್ಲಿರುವ ಬಡ ಜನತೆ ಮತ್ತು ಕರೊನಾ ವಾರಿಯರ್ಸ್‌ಗೆ ಕೈಲಾದಷ್ಟು ಸಹಕಾರ ನೀಡುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕಿದೆ ಎಂದು ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್ ತಿಳಿಸಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಗುರುವಾರ ಶುಭೋದಯ ಸೇವಾ ಸಂಸ್ಥೆಯಿಂದ ಮಾಸ್ಕ್, ಸ್ಯಾನಿಟೈಸರ್ ಹಾಗೂ ದಿನಸಿ ವಸ್ತುಗಳನ್ನು ವಿತರಿಸಿ ಮಾತನಾಡಿದರು.
ಶುಭೋದಯ ಸೇವಾ ಸಂಸ್ಥೆ 1 ಲಕ್ಷ ರೂ. ವೆಚ್ಚದ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಬಿ.ದುರ್ಗ ಹೋಬಳಿಯ ಎಲ್ಲ ಆಸ್ಪತ್ರೆಗಳ ಸಿಬ್ಬಂದಿ ಮತ್ತು ಹೋಂ ಕ್ವಾರಂಟೈನ್‌ಗಳು, ಆಶಾ ಕಾರ್ಯಕರ್ತರಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನಾರ್ಹ. ಇದರಂತೆ ಇತರ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಸವಿತಾ ಸಮಾಜದಿಂದಲೂ ಬಡವರಿಗೆ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ಸಮಾಜದ ರಾಜಣ್ಣ, ಶುಭೋದಯ ಸೇವಾ ಸಂಸ್ಥೆಯ ಕಾರ್ಯದರ್ಶಿ ಎಚ್.ಬಿ.ಕುಮಾರ್, ಬಿಜೆಪಿ ಮುಖಂಡ ಸಿದ್ದೇಶ್, ತಹಸೀಲ್ದಾರ್ ಕೆ.ನಾಗರಾಜ್, ಉಪ ತಹಸೀಲ್ದಾರ್ ಸಿದ್ದಪ್ಪ, ವೈದ್ಯಾಧಿಕಾರಿಗಳಾದ ಕೃಷ್ಣಮೂರ್ತಿ, ಪ್ರದೀಪ್ ಕುಮಾರ್, ಪಿಎಸ್‌ಐ ಮೋಹನ್ ಇದ್ದರು.