ರೈತರಿಗೆ ತ್ವರಿತವಾಗಿ ಪರಿಹಾರ ವಿತರಿಸಿ : ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪನಿಗೆ ಡಿಸಿ ಸೂಚನೆ

24CBP3
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ನಿಯಮಾನುಸಾರ ತ್ವರಿತವಾಗಿ ಪರಿಹಾರವನ್ನು ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪನಿಯ ಉಪ ವ್ಯವಸ್ಥಾಪಕರಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಬೆಳೆ ವಿಮೆ ಪರಿಹಾರ ವಿತರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಧಾರಾಕಾರ ಮಳೆಯಾಗಿದೆ. ಕಟಾವಿಗೆ ಬಂದ ಶೇ.50 ರಷ್ಟು ಬೆಳೆಗಳು ನಾಶವಾಗಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಶೀಘ್ರವಾಗಿ ಪರಿಹಾರ ಒದಗಿಸಬೇಕು. ಇದಕ್ಕೆ ವಿಮಾ ಕಂಪನಿಗಳು ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.

ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳು ಸಂತ್ರಸ್ತ ರೈತರಿಂದ ಅಗತ್ಯ ದಾಖಲೆ ಪಡೆದುಕೊಂಡಿದ್ದಾರೆ. ಇನ್ನೂ 15 ದಿನಗಳೊಳಗಾಗಿ ಸಂತ್ರಸ್ತ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕು ಎಂದರು.

ಪ್ರಸಕ್ತ ಸಾಲಿನಲ್ಲಿ ಉಂಟಾದ ನಷ್ಟಕ್ಕೆ ತ್ವರಿತ ಪರಿಹಾರ ಸಿಗಬೇಕು. ಆಗ ಮಾತ್ರ ರೈತರು ಮುಂಬರುವ ವರ್ಷಗಳಲ್ಲೂ ಬೆಳೆ ವಿಮೆ ಮಾಡಿಸಲು ಹೆಚ್ಚಿನ ಉತ್ಸಾಹ ತೋರಲು ಸಾಧ್ಯವಾಗುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪಾ, ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪನಿಯ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ವರುಣ್, ಶ್ರೀನಿವಾಸ್, ಪ್ರಗತಿ ಪರ ರೈತರಾದ ನವೀನ್, ಕುರುಬೂರು ಚಂದ್ರಶೇಖರ್ ಗೌಡ, ಮಂಜುನಾಥ್ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಬೆಳೆ ವಿಮೆ ಅಂಕಿ: ಜಿಲ್ಲೆಯಲ್ಲಿ ರಾಗಿ, ಮುಸುಕಿನ ಜೋಳ, ನೆಲಗಡಲೆ, ತೊಗರಿ ಸೇರಿ ವಿವಿಧ ಬೆಳೆಗಳಿಗೆ 10,563 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಈ ಪೈಕಿ ಚಿಕ್ಕಬಳ್ಳಾಪುರದಲ್ಲಿ 94, ಗೌರಿಬಿದನೂರಿನಲ್ಲಿ 5092, ಗುಡಿಬಂಡೆಯಲ್ಲಿ 1086, ಚಿಂತಾಮಣಿಯಲ್ಲಿ 269, ಬಾಗೇಪಲ್ಲಿಯಲ್ಲಿ 2824, ಶಿಡ್ಲಘಟ್ಟದಲ್ಲಿ 1198 ರೈತರು ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net