

ಧಾರವಾಡ: ‘ಚಿಗುರು’ ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಂದಿನ ಮಕ್ಕಳಲ್ಲಿನ ಪ್ರತಿಭೆ ಹೊರತರುವ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಧಾರವಾಡ ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟೆ ಹೇಳಿದರು.
ತಾಲೂಕಿನ ಕಲಕೇರಿ ಸಂಗೀತ ವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಚಿಗುರು’ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗದುಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮದ ಮಾದರಿಯಂತೆ ಕಲಕೇರಿ ಸಂಗೀತ ವಿದ್ಯಾಲಯದ ಪಾಠ ಶಾಲೆಗಳು ಜರುಗುತ್ತಿರುವುದು ಬಹಳ ಖುಷಿ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿದರು.
ಕಲಕೇರಿ ಗ್ರಾಪಂ ಅಧ್ಯಕ್ಷೆ ಭೀಮವ್ವ ಮರೇವಾಡ, ಉಪಾಧ್ಯಕ್ಷ ಮಂಜುನಾಥ ಇದ್ಲಿ, ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಆ್ಯಡಮ್ ಉಡ್ವರ್ಡ್, ಹಿರಿಯ ರಂಗಭೂಮಿ ಕಲಾವಿದ ವೀರಣ್ಣ ಪತ್ತಾರ, ಪ್ರಭು ಹಂಚಿನಾಳ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಕೇರಿ ಸಂಗೀತ ವಿದ್ಯಾಯಲದ ಕು.ಕೀರ್ತನಾ ನಾಯಕ ಮತ್ತು ವೃಂದದವರು ಸುಗಮ ಸಂಗೀತ ನಡೆಸಿಕೊಟ್ಟರು. ತುಳಸಿ ಮೊಕಾಶಿ ತಂಡದಿಂದ ಜಾನಪದ ಗೀತೆಗಳು, ದೀನಾ ರಾಘವೇಂದ್ರ ಅರಿವೇಡ್ ತಂಡದಿಂದ ಸಮೂಹ ನೃತ್ಯ ಹಾಗೂ ಪ್ರಣವ್ ಕಾಳೇನವರ ತಂಡದಿಂದ ನಾಟಕ, ನಮನ ಕಲೆಗಾರ ವೃಂದದಿಂದ ಶಾಸ್ತ್ರೀಯ ಸಂಗೀತ ಗಾಯನ ಮತ್ತು ಮನಸ್ವಿ ಎಚ್.ಜೆ ಅವರು, ಏಕಪತ್ರಾಭಿನಯ ಪ್ರದರ್ಶನ ನೀಡಿದರು.