

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳ ವಿಚಾರವಾಗಿ ಮತಾಂಧರು, ನಗರ ನಕ್ಸಲರು ಹಾಗೂ ಟಿಪ್ಪು ಪ್ರೇರಿತ ಗ್ಯಾಂಗ್‌ಗೆ ಬೆಂಬಲ ನೀಡುತ್ತಿದ್ದಾರೆ. ಇದರಲ್ಲಿ ಅವರದೇ ನೇರವಾದ ಕೈವಾಡವಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದರು.
ತಾಲೂಕಿನ ವರೂರನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ನಕ್ಸಲರು ಕಾಡುಬಿಟ್ಟು ನಾಡಿಗೆ ಬಂದಿದ್ದಾರೆ. ಅವರಿಗೆ ಕೆಂಪು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದ್ದಾರೆ. ಸಮೀರ ಎಂಬಾತ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತನಾಗಿದ್ದು, ಇಂಥವರಿಂದಲೇ ಸಿಎಂ ಕಚೇರಿ ಸುತ್ತುವರಿದಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪದೇ ಪದೆ ಹಿಂದು ಧರ್ಮಕ್ಕೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ಜೆಸಿಬಿಯನ್ನು ಧರ್ಮಸ್ಥಳ ಹೆಬ್ಬಾಗಿಲಿಗೆ ನುಗ್ಗಿಸುತ್ತೇವೆ ಎನ್ನುತ್ತಿದ್ದಾರೆ. ಷಡ್ಯಂತ್ರ ಇದೆ ಎಂದು ಡಿಕೆಶಿ ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಬಾಯಲ್ಲಿ ಈ ಬಗ್ಗೆ ಒಂದೂ ಮಾತು ಬಂದಿದೆಯಾ? ಡಿ.ಕೆ. ಶಿವಕುಮಾರ ಇದನ್ನೆಲ್ಲ ನಿಭಾಯಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲೇ ಒಡಕಿದೆ. ಅಲ್ಲಿ ಹಿಂದು ಪರ ಮತ್ತು ವಿರೋಧಿ ಗ್ಯಾಂಗ್ ಇದೆ ಎಂದು ಕುಟುಕಿದರು.
ಧರ್ಮಸ್ಥಳ ವಿಚಾರವಾಗಿ ಎಸ್‌ಐಟಿ ತನಿಖೆ ನಡೆಸುವಂತೆ ಪೊಲೀಸರೇ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಎಲ್ಲ ಕೇಸ್‌ಗೂ ಇದೇ ರೀತಿ ಮಾಡುತ್ತಾರಾ?. ಪ್ರತಿಪಕ್ಷದವರು ಒತ್ತಾಯಿಸಿದಗೂ ಯಾವೊಂದು ತನಿಖೆಗೂ ಸರ್ಕಾರ ಮುಂದಾಗಲಿಲ್ಲ. ದಿನಾಲು 10-20 ಅಡಿ ಅಗೆಯುವ ಬದಲು ಒಂದೇ ಸಲ ನೂರಡಿ ತೆಗೆದು ತನಿಖೆ ಮಾಡಿಬಿಡಿ ಎಂದು ಆಗ್ರಹಿಸಿದರು.
ಧರ್ಮಸ್ಥಳ ವಿಚಾರದಲ್ಲಿ ನಾವು ರಾಜಕಾರಣ ಮಾಡಿಲ್ಲ. ಈ ಪ್ರಕರಣದಲ್ಲಿ ರಾಜಕಾರಣ ಮಾಡಿದ್ದೇ ಕಾಂಗ್ರೆಸ್. ಇದರ ಹಿಂದೆ ಖತರ್ನಾಕ ಗ್ಯಾಂಗ್ ಇದೆ. ದಂಡುಪಾಳ್ಯ ರೀತಿ ನಗರ ನಕ್ಸಲರ ಗ್ಯಾಂಗ್ ಇದರ ಹಿಂದಿದೆ. ಯ್ಯೂಟೂಬ್ ಚಾನಲ್ ಮಾಡಲು ಎಲ್ಲಿಂದ ಹಣ ಬರುತ್ತಿದೆ? ಈ ಬಗ್ಗೆ ಎನ್‌ಐಎ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಹಿಂದು ಧರ್ಮ ಬಿಜೆಪಿ ಸ್ವತ್ತಲ್ಲ ಎನ್ನುವ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ, ಮೊದಲು ಅದು ನಿಮ್ಮ ಸ್ವತ್ತಾ ಎಂದು ಹೇಳಲಿ?. ಮಸೀದಿ ಬಗ್ಗೆ ಈ ರೀತಿ ಆರೋಪ ಬಂದಿದ್ದರೆ ನೀವು ತನಿಖೆಗೆ ಕೊಡುತ್ತಿದ್ದೀರಾ ಎಂಬುದನ್ನು ಎದೆ ಮುಟ್ಟಿಕೊಂಡು ಹೇಳಿ ಎಂದು ಸವಾಲು ಹಾಕಿದರು.