

ಶಿರಸಿ: ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲನಿ ರಜನೀಶ್ ಅವರು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ. ಹಾಗೂ ಇನ್ನಿತರ ಜಿಲ್ಲಾಧಿಕಾರಿಗಳನ್ನು ಇತ್ತೀಚೆಗೆ ಅಭಿನಂದಿಸಿ ಬರೆದ ಅಭಿನಂದನಾ ಪತ್ರ ಅಸಮಂಜಸ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸುಪ್ರೀಂ ಕೋರ್ಟ್ ಆದೇಶ ಮತ್ತು ಅರಣ್ಯ ಹಕ್ಕು ಕಾಯ್ದೆಗೆ ವ್ಯತಿರಿಕ್ತವಾಗಿ ರಾಜ್ಯದಲ್ಲಿ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನಾ ಕಾರ್ಯ ಅಸ್ತಿತ್ವವಿಲ್ಲದ ಮತ್ತು ಅಪೂರ್ಣ ಸಮಿತಿಯಿಂದ ಮಾಡಲು ಕಾನೂನಿನಲ್ಲಿ ಮಾನ್ಯತೆ ಇಲ್ಲದಿದ್ದರೂ ಕೈಗೆತ್ತಿಗೊಳ್ಳಲು ತೀರ್ವನಿಸಲಾಗಿತ್ತು. ಇಂತಹ ಕಾನೂನು ಬಾಹಿರ ಕೃತ್ಯಕ್ಕೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಕಾನೂನು ಬಾಹಿರವಾಗಿ ಪುನರ್ ಪರಿಶೀಲಿಸುವ ಕಾರ್ಯ ಶ್ಲಾಘಿಸಿ ಅಭಿನಂದಿಸಿ ಪತ್ರ ಬರೆದಿರುವುದು ಖಂಡನಾರ್ಹ ಎಂದಿದ್ದಾರೆ.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006 ಮತ್ತು ನಿಯಮ-2007ರ ಅನುಷ್ಟಾನಕ್ಕೆ ಸಂಬಂಧಿಸಿ ಸವೋಚ್ಚ ನ್ಯಾಯಾಲಯವು 2019ರ ಫೆಬ್ರವರಿ 28ರಲ್ಲಿ ನೀಡಿದ ಆದೇಶದಲ್ಲಿ ಸೂಚಿಸಿರುವಂತೆ ಮಂಡ್ಯ ಜಿಲ್ಲೆಯಲ್ಲಿ ತಿರಸ್ಕರಿಸಲಾದ ಒಟ್ಟು 407 ಅರ್ಜಿಗಳ ಪೈಕಿ, 407 ಅರ್ಜಿಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ 241 ಅರ್ಜಿಗಳ ಪೈಕಿ 241 ಅರ್ಜಿಗಳ ಪುನರ್ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಈ ಜಿಲ್ಲೆಯಲ್ಲಿ ಸಾಧಿಸಿರುವ ಈ ಪ್ರಗತಿಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಅರಣ್ಯ ಹಕ್ಕು ಸಮಿತಿಗಳ ಕಾರ್ಯವನ್ನು ಮುಖ್ಯ ಕಾರ್ಯದರ್ಶಿಯವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಹಾಗೂ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ ಚುನಾಯಿತ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯ ಹಕ್ಕು ತಿರಸ್ಕೃತ ಅರ್ಜಿಗಳನ್ನು ಪುನರ್ ಪರಿಶೀಲನೆ ಕಾರ್ಯವನ್ನು ಮುಂದಿನ ನಿರ್ದೇಶನವರೆಗೆ ತಡೆಹಿಡಿಯುವಂತೆ ಸರ್ಕಾರದ ಕಾರ್ಯದರ್ಶಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ರಂದೀಪ್.ಡಿ ಅವರು ಸರ್ಕಾರದ ಪರವಾಗಿ 2025ರ ಫೆಬ್ರವರಿ 12ರಂದು ಆದೇಶ ಪ್ರಕಟಿಸಿದ್ದಾರೆ.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ನಾಮನಿರ್ದೇಶನ ಮೂರು ಸದಸ್ಯರ ಅನುಪಸ್ಥಿತಿಯಲ್ಲಿ ಪುನರ್ ಪರಿಶೀಲಿಸುವ ಕಾರ್ಯಕ್ಕೆ ಮುಖ್ಯ ಕಾರ್ಯದರ್ಶಿ ಅಭಿನಂದಿಸುವ ಮೂಲಕ ಸರ್ಕಾರದ ಆದೇಶ, ಸರ್ಕಾರದಿಂದಲೇ ಉಲ್ಲಂಘನೆ ಎಂಬ ಕುರಿತು ರಾಜ್ಯಾದಂತ ಚರ್ಚೆಗೆ ಕಾರಣವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.