

ಜಗಳೂರು: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ಸಮುದಾಯ ಭವನಗಳಿಗೆ ಹೋಗುವ ರಸ್ತೆಗೆ ಅಡ್ಡಲಾಗಿ ಅನಧಿಕೃತವಾಗಿ ನಿರ್ವಿುಸಿಕೊಂಡಿರುವ 11 ಮನೆಗಳ ಶೌಚಗೃಹಗಳನ್ನು ತೆರವುಗೊಳಿಸುವಂತೆ ಮಂಗಳವಾರ ಆದಿಜಾಂಬವ ಮಾದಿಗ ಸಮಾಜ ಸೇವಾ ಸಂಘವು ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಜಿ.ಎಚ್. ಶಂಭುಲಿಂಗಪ್ಪ ಮಾತನಾಡಿ, ಭವನಗಳಲ್ಲಿ ನಿತ್ಯ ಅನೇಕ ಶುಭ ಕಾರ್ಯಕ್ರಮಗಳು ನಡೆಯುತ್ತವೆ. ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಶೌಚಗೃಹ ತೆರವುಗೊಳಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಶೌಚಗೃಹಗಳ ಮಾಲೀಕರಿಗೆ ಕೂಡಲೇ ನೋಟಿಸ್ ನೀಡಿ ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿವೃತ್ತ ನೌಕರ ಪಾಪಯ್ಯ, ದಸಂಸ ಸಂಚಾಲಕ ಕುಬೇಂದ್ರಪ್ಪ, ಮುಖಂಡರಾದ ಬಿಳಿಚೋಡು ಹಾಲೇಶ್, ಚಂದ್ರಪ್ಪ ಭೈರನಾಯಕನಹಳ್ಳಿ, ಗುತ್ತಿದುರ್ಗ ಮಹಾಂತೇಶ್, ಅಣಬೂರು ರೇಣುಕೇಶ್, ಗೌರಮ್ಮನಹಳ್ಳಿ ವೆಂಕಟೇಶ್, ಚಿಕ್ಕಬನ್ನಿಹಟ್ಟಿ ಕರಿಬಸಪ್ಪ, ಮೆದಗಿನಕೆರೆ ಹನುಮಂತಪ್ಪ ಇದ್ದರು.