ಮುಖ್ಯಾಧಿಕಾರಿ ವಿರುದ್ಧ ಸಿಡಿದೆದ್ದ ಜಗಳೂರು ಪಪಂ ಸದಸ್ಯರು: 'ಬೋಗಸ್' ಬಿಲ್ ಸೃಷ್ಟಿಸಿ ಭಾರೀ ಅವ್ಯವಹಾರ ಆರೋಪ

jlr w
Published on

ಜಗಳೂರು: ಜಗಳೂರು: ಪಟ್ಟಣ ಪಂಚಾಯಿತಿ (ಪಪಂ) ಯಲ್ಲಿ ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಪಪಂ ಸದಸ್ಯರು ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರ ವಿರುದ್ಧ ಸಿಡಿದೆದ್ದಿದ್ದಾರೆ.

ಮುಖ್ಯಾಧಿಕಾರಿಗಳು "ಆನೆ ನಡೆದದ್ದೇ ದಾರಿ" ಎನ್ನುವಂತೆ ವರ್ತಿಸುತ್ತಿದ್ದು, ಚುನಾಯಿತ ಸದಸ್ಯರನ್ನು ಲೆಕ್ಕಕ್ಕೇ ಇಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಬುಧವಾರ ನಡೆದ ಸಭೆಯಲ್ಲಿ ಅಧ್ಯಕ್ಷ ಕೆ.ಎಸ್. ನವೀನ್‌ಕುಮಾರ್ ಅವರಿಗೆ ಲಿಖಿತ ದೂರು ನೀಡಿದರು.

ಲೆಕ್ಕಪತ್ರಕ್ಕೆ ಒತ್ತಾಯ, ಮಾಹಿತಿ ನೀಡಲು ಮುಖ್ಯಾಧಿಕಾರಿ ನಿರಾಕರಣೆ

ಸಭೆಯಲ್ಲಿ ಸದಸ್ಯರು ಮುಖ್ಯಾಧಿಕಾರಿಯವರನ್ನು ಪ್ರಶ್ನಿಸಿ, "ಈವರೆಗೂ ಎಷ್ಟು ಅನುದಾನ ಬಿಡುಗಡೆಯಾಗಿದೆ? ಯಾವುದಕ್ಕೆ ಖರ್ಚು ಮಾಡಲಾಗಿದೆ? ಸಂಪೂರ್ಣ ಲೆಕ್ಕ ಕೊಡಿ" ಎಂದು ಪಟ್ಟುಹಿಡಿದರು.

ಆದರೆ, ಮುಖ್ಯಾಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡಲು ವಿಫಲರಾದರು ಎಂದು ಸದಸ್ಯರು ದೂರಿದ್ದಾರೆ.

ಸದಸ್ಯ ರಮೇಶ್‌ರೆಡ್ಡಿ ಮಾತನಾಡಿ, "ಪಪಂ ಕಟ್ಟಡ ಮಾತ್ರ ದೊಡ್ಡದಾಗಿದೆ, ಆದರೆ ಆರ್ಥಿಕವಾಗಿ ಬಡವಾಗಿದೆ. ಯಾವುದೇ ಮಾಹಿತಿ ಕೇಳಿದರೆ ನೀಡುವುದಿಲ್ಲ. ವಾರ್ಡ್‌ಗಳಲ್ಲಿ ಕೆಲಸ ಮಾಡಿಸಲು ಹೇಳಿದರೆ 'ಹಣವಿಲ್ಲ' ಎಂಬ ಉತ್ತರ ಅವರಿಗೆ ಕಂಠಪಾಠವಾಗಿದೆ," ಎಂದು ಆಕ್ರೋಶ ಹೊರಹಾಕಿದರು.

ಪೌರಕಾರ್ಮಿಕರಿಗೆ ಸಂಬಳವಿಲ್ಲ, ಅಧಿಕಾರಿಗಳಿಗೆ ಮಾತ್ರ ನ್ಯಾಯಾನಾ?

ಮುಖ್ಯಾಧಿಕಾರಿಯ ಬೇಜವಾಬ್ದಾರಿಯಿಂದಾಗಿ ಪಟ್ಟಣದಲ್ಲಿ ಪೌರಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.

* ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸುವ ಗುತ್ತಿಗೆ ಪೌರಕಾರ್ಮಿಕರಿಗೆ ಹಲವು ತಿಂಗಳಿಂದ ಸಂಬಳ ನೀಡಿಲ್ಲ.

* ಮನೆ ಮನೆಗೆ ಕಸ ಸಾಗಿಸುವ ಗಾಡಿಗಳ ರಿಪೇರಿ, ವಾಹನಗಳ ಡಿಸೇಲ್‌ಗೂ ಹಣವಿಲ್ಲ.

* "ಅಧಿಕಾರಿಗಳಿಗೆ ಒಂದು ತಿಂಗಳು ವೇತನ ನಿಲ್ಲಿಸಿದರೆ ಸುಮ್ಮನಿರುತ್ತಾರೆ? ಬಡ ಕಾರ್ಮಿಕರಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯಾನಾ?" ಎಂದು ಸದಸ್ಯರು ಪ್ರಶ್ನಿಸಿದ್ದಾರೆ.

"ಅನಾಮಧೇಯ ವ್ಯಕ್ತಿಗಳಿಗೆ ಚೆಕ್ ವಿತರಣೆ, ತನಿಖೆಗೆ ಒತ್ತಾಯ"

ಕಂದಾಯ, ನೀರಿನ ಕಂದಾಯ, ಖಾತೆ ಬದಲಾವಣೆಯಿಂದ ಆದಾಯ ಬರುತ್ತಿದ್ದರೂ, ಜೆಸಿಬಿ, ವಾಹನಗಳ ಡಿಸೇಲ್‌ಗೆ ಹಣವಿಲ್ಲ ಎಂದರೆ, ಆ ಹಣವೆಲ್ಲ ಎಲ್ಲಿ ಮಾಯವಾಗಿದೆ ಎಂದು ಸದಸ್ಯರು ಪ್ರಶ್ನಿಸಿದ್ದಾರೆ.

ಸದಸ್ಯರು ನಿರ್ದಿಷ್ಟವಾಗಿ ಗುತ್ತಿಗೆದಾರ ಜಿಲಾನಿ ಹೆಸರಿನಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ತೋರಿಸಿ ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ಹಣ ಗುಳುಂ ಮಾಡಲಾಗಿದೆ ಎಂದು ಆರೋಪಿಸಿದರು.

ಇದರ ಜೊತೆಗೆ, "ಅನಾಮಧೇಯ ವ್ಯಕ್ತಿಗಳಿಗೆ ₹6.5 ಲಕ್ಷ ಮತ್ತು ₹5 ಲಕ್ಷ ಹೀಗೆ ಅನೇಕ ಚೆಕ್‌ಗಳನ್ನು ಬರೆದಿದ್ದಾರೆ. ಕೂಡಲೇ ಈ ಅವ್ಯವಹಾರದ ಬಗ್ಗೆ ಮೇಲಧಿಕಾರಿಗಳು ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದರು.

ಸದಸ್ಯ ದೇವರಾಜ್ ಮಾತನಾಡಿ, "ಸದಸ್ಯರಾಗಿ ಆಯ್ಕೆಯಾದಾಗಿನಿಂದಲೂ ನಮ್ಮ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ. ನಾವು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ," ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಅಧಿಕಾರಾವಧಿ ಮುಗಿದ ಕೂಡಲೇ ಕಂದಾಯ ವಸೂಲಿ ಮಾಡಿ ಹಣ ಗುಳುಂ ಮಾಡುವ ಹುನ್ನಾರ ನಡೆಸಿದ್ದಾರೆಂದೂ ಸದಸ್ಯರು ದೂರಿದ್ದಾರೆ.

ಮುಖ್ಯಾಧಿಕಾರಿ ವಿರುದ್ಧ ಅಧ್ಯಕ್ಷರಿಂದಲೂ ಅಸಮಾಧಾನ

ಸದಸ್ಯರ ಆರೋಪಗಳಿಗೆ ಪಪಂ ಅಧ್ಯಕ್ಷ ಕೆ.ಎಸ್. ನವೀನ್‌ಕುಮಾರ್ ಸಹ ದನಿಗೂಡಿಸಿದರು. "ಪಟ್ಟಣ ಪಂಚಾಯಿತಿಯಲ್ಲಿ ನನ್ನ ಗಮನಕ್ಕೆ ತಂದು ಕೆಲಸ ಮಾಡಬೇಕು ಎಂಬ ಕನಿಷ್ಠ ಜ್ಞಾನವೂ ಮುಖ್ಯಾಧಿಕಾರಿಗಿಲ್ಲ. ಬೇಕಾಬಿಟ್ಟಿ ಹಣ ದುರುಪಯೋಗ ಮಾಡಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದ್ದಾರೆ. ಹೊಸದಾಗಿ ಸದಸ್ಯರು ಬರುವವರೆಗೂ ಅವರೊಬ್ಬರೇ ಆಡಳಿತ ಮಾಡಲಿ," ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದಸ್ಯ ರೇವಣಸಿದ್ದಪ್ಪ ಅವರು ಮುಖ್ಯಾಧಿಕಾರಿಗಳು ಅಧ್ಯಕ್ಷರ ಮಾತಿಗೂ ಕ್ಯಾರೇ ಎನ್ನುವುದಿಲ್ಲ. ಯಾರು ಏನೇ ಹೇಳಿದರೂ ಕೇಳುವ ಸೌಜನ್ಯವಿಲ್ಲ, ಎಲ್ಲರಿಗೂ ಮೋಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

'ಆರೋಪ ನಿರಾಧಾರ, ಎಲ್ಲದಕ್ಕೂ ಲೆಕ್ಕವಿದೆ': ಮುಖ್ಯಾಧಿಕಾರಿ ಸ್ಪಷ್ಟನೆ

ಸದಸ್ಯರ ಎಲ್ಲಾ ಆರೋಪಗಳನ್ನು ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರು ನಿರಾಕರಿಸಿದ್ದಾರೆ.

"ಜಗಳೂರಿನಲ್ಲಿ ಕೆಲಸ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಹಣ ದುರುಪಯೋಗವಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಎಲ್ಲದಕ್ಕೂ ಲೆಕ್ಕವಿದೆ. ಯಾವುದೋ ದುರುದ್ದೇಶಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವುದು ಸರಿಯಲ್ಲ," ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

* ಪೆಟ್ರೋಲ್ ಬಂಕ್ ಬಿಲ್‌ನಲ್ಲಿ ವ್ಯತ್ಯಾಸ ಇರುವುದರಿಂದ ಅದನ್ನು ತಡೆ ಹಿಡಿಯಲಾಗಿದೆ.

* ಈಗ ಗಣತಿ ಕಾರ್ಯದಲ್ಲಿ ತೊಡಗಿರುವುದರಿಂದ ಕರ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ.

* ಬಿ. ಖಾತಾದಿಂದ ಬರುವ ಹಣದಲ್ಲಿ ಪೌರಕಾರ್ಮಿಕರಿಗೆ ಸಂಬಳ ನೀಡಲಾಗುವುದು.

ತಾನು ಕಾನೂನು ರೀತಿಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ಮುಖ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಈ ವಿವಾದವು ಸ್ಥಳೀಯ ರಾಜಕೀಯದಲ್ಲಿ ಹೊಸ ತಿರುವನ್ನು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net