

ಬೆಳ್ತಂಗಡಿ: ಗಂಭೀರ ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಮೂರುಗೋಳಿಯ ಪ್ರವೀಣ್ ಎಂ. ಅವರಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಯಿತು. ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗರ ಪುತ್ರ ಪ್ರವೀಣ್ ಎಂ. 2002ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಸೇವೆ ಆರಂಭಿಸಿದ್ದು, ಬಳಿಕ ಬೆಳ್ತಂಗಡಿ ವೃತ್ತ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ, ಬಂಟ್ವಾಳ ಡಿವೈಎಸ್ಪಿ ವಿಶೇಷ ಅಪರಾಧ ದಳ, ವೇಣೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭ ಸೇರಿದಂತೆ ಕೆಲವು ಬಾರಿ ಎನ್‌ಐಎಯೊಂದಿಗೂ ಕೆಲಸ ಮಾಡಿದ್ದಾರೆ. ಅಪರಾಧ ಪತ್ತೆ ಕರ್ತವ್ಯಕ್ಕೆ 57 ನಗದು ಪುರಸ್ಕಾರ ಹಾಗೂ ಇತರ ಪ್ರಶಸ್ತಿ ಲಭಿಸಿವೆ.