ದಲಿತರು, ಹಿಂದುಳಿದವರಿಗೆ ಮುಖ್ಯಮಂತ್ರಿಯಿಂದ ಅನ್ಯಾಯ

ex minister k.s.eshwarappa
Published on

ಶಿವಮೊಗ್ಗ: ಹಿಂದುಳಿದ ವರ್ಗಗಳ ಹಿತವನ್ನೇ ಮರೆತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಸಮಿತಿಗೆ ನೇಮಕ ಮಾಡಿರುವುದು ಅಚ್ಚರಿ ತಂದಿದೆ. ಎಸ್‌ಸಿ, ಎಸ್‌ಟಿಗಳು, ಹಿಂದುಳಿದವರಿಗೆ ಹೇಗೆಲ್ಲ ಮೋಸ ಮಾಡಬಹುದು ಎಂಬುದನ್ನು ಬೇರೆ ರಾಜ್ಯದವರಿಗೂ ತೋರಿಸಲು ಆ ಸಮಿತಿಗೆ ಸಿದ್ದರಾಮಯ್ಯ ಅಧ್ಯಾಪಕರಾಗಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣವನ್ನೇ ಬಯಸದ ಸಿದ್ದರಾಮಯ್ಯ ಅವರನ್ನು ಹೇಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ. ಹಿಂದುಳಿದವರ ವಿರೋಧಿಯಾದ ಅವರನ್ನು ಕೇಂದ್ರ ಸಮಿತಿಯಿಂದ ಕಿತ್ತೊಗೆಯಬೇಕು. ಹಿಂದುಳಿದವರು, ದಲಿತರಿಗೆ ಅನ್ಯಾಯ ಮಾಡಿದ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳನ್ನು ಕೊಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಗ್ಯಾರಂಟಿಗೆ ಹಣ ಹೊಂದಿಸಿಕೊಳ್ಳಲು ದಲಿತರು, ಹಿಂದುಳಿದವರ ಅನುದಾನ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಅನುದಾನವನ್ನು ಗ್ಯಾರಂಟಿಗೆ ಬಳಸಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದವರ ಕಲ್ಯಾಣಕ್ಕೆ ಮೀಸಲಿದ್ದ 37 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿಗೆ ಬಳಸಿಕೊಳ್ಳಲಾಗಿದೆ. ಇದು ಪರಿಶಿಷ್ಟರಿಗೆ ಸಿದ್ದರಾಮಯ್ಯ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದರು.

ಪ್ರಮುಖರಾದ ಇ.ವಿಶ್ವಾಸ್, ಎಸ್.ಜಿ.ಬಾಲು, ಮೋಹನ್ ಜಾಧವ್, ಶಿವಾಜಿ, ಕುಬೇರಪ್ಪ, ವಿನಯ್, ಸತ್ಯನಾರಾಯಣ್, ಗುರುರಾಜ್ ಎಂ. ಶೇಟ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net