

ಬೆಂಗಳೂರು: ಸಿಂಧಗಿ ಮತ್ತು ಹಾನಗಲ್ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶತಪ್ರಯತ್ನ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ ತಳವಾರ ಸಮುದಾಯದ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡದಿರುವ ಸಮಸ್ಯೆ ಇದೆ. ಅದನ್ನು ಬಗೆ ಹರಿಸುವಂತೆ ಸಮುದಾಯದ ಮುಖಂಡರು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದು, ಕೂಡಲೇ ಆದೇಶ ನೀಡದಿದ್ದರೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ಎಚ್ಚರಿಕೆ ನೀಡಿದ್ದರು. ಇದರಿಂದಾಗಿಯೇ ತಳವಾರ ಸಮುದಾಯದ ಮುಖಂಡರನ್ನು ಬುಧವಾರ ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಸಿಕೊಂಡು, ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಆದೇಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಎರಡು ಕ್ಷೇತ್ರದಲ್ಲಿ ಅದರಲ್ಲೂ ಸಿಂಧಗಿಯಲ್ಲಿ ನಿರ್ಣಾಯಕ ಪ್ರಮಾಣದಲ್ಲಿ ತಳವಾರ ಸಮುದಾಯ ಇದೆ. ಆದ್ದರಿಂದಲೇ ಆ ಸಮುದಾಯ ಸೆಳೆಯಲು ಸರ್ಕಸ್ ನಡೆಸಿದ್ದಾರೆ. ಸಮುದಾಯದ ಮುಖಂಡರಾದ ಶಿವಾಜಿ ಮೆಟಗಾರ್ ನೇತೃತ್ವದ ನಿಯೋಗ ಕರೆಸಿ ಮಾತುಕತೆ ನಡೆಸಿದ್ದರು. ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುವಂತೆಯೂ ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.
ಚುನಾವಣಾ ಪ್ರಚಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಪಟ್ಟು
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಸಂಪುಟ ಸೇರ್ಪಡೆ ಹಾಗೂ ಚುನಾವಣಾ ಪ್ರಚಾರದ ಬಗ್ಗೆ ಚರ್ಚೆ ನಡೆಸಿದರು. ಮಂಗಳವಾರ ಸಹ ಸಿಎಂ ಭೇಟಿ ನೀಡಿದ್ದ ಜಾರಕಿಹೊಳಿ ಕೇವಲ ಸಂಪುಟ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಿದ್ದರು. ಬುಧವಾರ ಉಪಚುನಾವಣೆ ನಡೆಯುವ ಎರಡು ಕ್ಷೇತ್ರದಲ್ಲಿ ಪ್ರಚಾರಕ್ಕೆ ತೊಡಗಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದರು. ಬೇರೆ ಬೇರೆ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದವರು ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಸಂಪುಟದಲ್ಲಿಯೂ ಇದ್ದಾರೆ, ನನಗೆ ಮಾತ್ರ ನಿರ್ಬಂಧ ಏಕೆ ಎಂಬ ಅಸಮಾಧಾನ ವ್ಯಕ್ತಪಡಿಸಿದರೆಂದು ಹೇಳಲಾಗಿದೆ. ಆದಷ್ಟು ಬೇಗ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸುವಂತೆಯೂ ಜಾರಕಿಹೊಳಿ ಒತ್ತಡ ಹಾಕಿದ್ದಾರೆ. ಚುನಾವಣೆ ಮುಗಿಯುವ ತನಕ ಮೌನವಾಗಿರುವಂತೆ ಸಿಎಂ ಸೂಚನೆ ನೀಡಿ ಕಳುಹಿಸಿಕೊಟ್ಟರೆಂದು ತಿಳಿದುಬಂದಿದೆ. ಗುರುವಾರದಿಂದಲೇ ಪ್ರಚಾರದಲ್ಲಿ ತೊಡಗಲು ಹಾಗೂ ನಾಯಕ ಸಮುದಾಯದ ಮತಗಳನ್ನು ಹೆಚ್ಚೆಚ್ಚು ಸೆಳೆಯಲು ಸಹಕರಿಸುವಂತೆ ರಮೇಶ್ ಜಾರಕಿಹೊಳಿಗೆ ಸಿಎಂ ಸೂಚನೆ ನೀಡಿದರು.
ಸಿಂದಗಿ, ಹಾನಗಲ್ ಉಪ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈಗಾಗಲೆ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದೇನೆ. ಹಾನಗಲ್ ಕ್ಷೇತ್ರದಲ್ಲಿ ಅ.21ರಿಂದ ಮೂರು ದಿನ ಪ್ರಚಾರ ಕೈಗೊಳ್ಳಲಿದ್ದೇನೆ. | ಬಸವರಾಜ ಬೊಮ್ಮಾಯಿ ಸಿಎಂ
ಬಿಎಸ್ವೈ ನೋಡಲು ಬಂದ ಜನಸಾಗರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮನ ಹಿನ್ನೆಲೆಯಲ್ಲಿ ಸಿಂದಗಿಯ ವಿವಿಧ ಭಾಗಗಳಿಂದ ಅಪಾರ ಜನಸ್ತೋಮ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಬೈಕ್, ಟಂಟಂ ಹಾಗೂ ಕ್ರೂಸರ್ ತುಂಬಿಕೊಂಡು ಬಂದಿದ್ದರು. ಎರಡು ದಿನಗಳ ಹಿಂದೆ ಮೋರಟಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಸ್ಥಳದಲ್ಲಿಯೇ ಬಿಜೆಪಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಕಾಂಗ್ರೆಸ್ಗೆ ಮೀರಿಸುವ ರೀತಿಯಲ್ಲಿ ಜನರು ಜಮಾವಣೆಗೊಂಡಿದ್ದರು. ಯುವಕರು ಬಿಜೆಪಿ ಧ್ವಜ ಕಟ್ಟಿಕೊಂಡು ಬೃಹತ್ ಬೈಕ್ ರ‍್ಯಾಲಿ ನಡೆಸಿದರು. ಡೊಳ್ಳು, ಹಲಗೆ ಮೇಳ ಗಮನ ಸೆಳೆಯಿತು. ಒಟ್ಟಿನಲ್ಲಿ ಬಿಎಸ್ವೈ ಆಗಮನ ಹೊಸ ಸಂಚಲನ ಮೂಡಿಸಿತು.
7 ವರ್ಷಗಳಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿ 18 ಲಕ್ಷ ಕೋಟಿ ರೂ. ಸಂಪಾದಿಸಿದೆ. ರಾಜ್ಯ ಸರ್ಕಾರ ಕಳೆದ 20 ತಿಂಗಳಲ್ಲಿ 7 ಸಾವಿರ ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಸುಲಿಗೆ ಮಾಡಿದೆ. ಸರ್ಕಾರ ಈ ರೀತಿ ನಡೆದುಕೊಂಡರೆ ಜನ ಏನು ಮಾಡಬೇಕು? | ರಣದೀಪಸಿಂಗ್ ಸುರ್ಜೆವಾಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಉಪಚುನಾವಣೆ ಪ್ರಚಾರಕ್ಕೆ ಬನ್ನಿ ಉಪ ಚುನಾವಣಾ ಸಮರದಲ್ಲಿ ತೊಡಗಿಸಿಕೊಳ್ಳಲು ಬರುವಂತೆ ಪಕ್ಷದ ಶಾಸಕರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೂಚನೆ ರವಾನಿಸಿದ್ದಾರೆ. ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದು, ಉಪಚುನಾವಣೆಯಲ್ಲಿ ತನ್ನ ಶಕ್ತಿ ಸಾಬೀತು ಮಾಡುವ ಮೂಲಕ ಕಾರ್ಯಕರ್ತರಲ್ಲಿ ಆತ್ಮಸೆôರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಗೌಡರು ಪಕ್ಷದ ಪ್ರಮುಖರಿಗೆ ತಿಳಿಸಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರವೇ ಶಾಸಕರು ಸೀಮಿತವಾದರೆ, ಪಕ್ಷ ಬೆಳೆಸುವುದು ಹೇಗೆ? ಪಕ್ಷದ ಋಣ ಸಂದಾಯ ಮಾಡಲು ಕನಿಷ್ಠ ಜವಾಬ್ದಾರಿ ತೋರಿಸಬೇಕಲ್ಲವೇ? ಎಂದಿರುವುದು ಕೆಲ ಶಾಸಕರ ಮನಸ್ಸಿಗೆ ನಾಟಿದೆ. ಈ ಇಳಿ ವಯಸ್ಸಿನಲ್ಲಿಯೂ ಗೌಡರು ಸಿಂದಗಿಯಲ್ಲಿಯೇ ಠಿಕಾಣಿ ಹೂಡಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ನಮಗೆ ಮುಜುಗರ ತರುವ ಸಂಗತಿ. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ನಾವು ಚುನಾವಣಾ ಪ್ರಚಾರಕ್ಕೆ ತೆರಳುತ್ತಿರುವುದಾಗಿ ಕೆಲ ಶಾಸಕರು ವಿಜಯವಾಣಿಗೆ ತಿಳಿಸಿದ್ದಾರೆ. ಚುನಾವಣೆಗೆ ದೇಣಿಗೆ ನೀಡುವ ವಿಚಾರದಲ್ಲೂ ನಮ್ಮ ಕೈಲಾದ ಮಟ್ಟಿಗೆ ಸ್ಪಂದನೆ ಮಾಡುತ್ತಿದ್ದೇವೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿಗಳ ಜವಾಬ್ದಾರಿಯನ್ನು ಶಾಸಕರಿಗೆ ವಹಿಸಿಕೊಡಲು ನಿರ್ಣಯಿಸಲಾಗಿದೆ. ಆ ಪ್ರಕಾರವೇ ನಮ್ಮ ಪಾಲಿನ ಜವಾಬ್ದಾರಿ ಹೊತ್ತು ಚುನಾವಣೆ ನಿಭಾಯಿಸಲಿದ್ದೇವೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಂದಗಿ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಸ್ವೀಕಾರ ಮಾಡಿದ್ದು ಅಲ್ಲಿ ಏನಾದರೂ ಮಾಡಿ ಜೆಡಿಎಸ್ ಅಸ್ಥಿತ್ವ ಉಳಿಸಿಕೊಳ್ಳುವ ಹರಸಾಹಸ ಮಾಡುತ್ತಿದ್ದು, ಅದಕ್ಕೆ ಸಾಥ್ ನೀಡಲು ತಡವಾಗಿ ದಳಪತಿಗಳು ಮುಂದಾಗಿರುವುದು ವಿಶೇಷ.
ರಾಹುಲ್ ಗಾಂಧಿ ಬಗ್ಗೆ ಗೌರವ ಇದೆ. ಯಾರೂ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಬಿಜೆಪಿ ರಾಜ್ಯಾಧ್ಯಕ್ಷರು ಆ ರೀತಿ ಮಾತನಾಡಿದ್ದು ಸರಿಯಲ್ಲ. | ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ರಾಹುಲ್ಗಾಂಧಿ ಕುಟುಂಬದ ತ್ಯಾಗದ ಮುಂದೆ ಬಿಜೆಪಿ ಶೇ.1ರಷ್ಟೂ ಸಮವಿಲ್ಲ. ನಮ್ಮ ಪಕ್ಷ ಬದುಕಿದೆ. ಚುನಾವಣೆ ಮುಗಿದ ಮೇಲೆ ಈ ವಿಚಾರವಾಗಿ ಮಾತಾಡುತ್ತೇವೆ. ಮಾನಸಿಕ ಅಸ್ವಸ್ಥರಿಗೆ ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇವೆ. ಇದು ಮುಖ್ಯಮಂತ್ರಿ ಜಿಲ್ಲೆಯಾದ್ದರಿಂದ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ, ಜನರ ಸಮಸ್ಯೆಗಳ ವಿಚಾರ ಮರೆಮಾಚಲು ವೈಯಕ್ತಿಕ ಟೀಕೆಗೆ ಬೆಂಬಲ ನೀಡುತ್ತಿದ್ದಾರೆ. | ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷ