

ಶನಿವಾರಸಂತೆ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಕಾರ್ಯಕರ್ತರ ಸಮಾವೇಶ ಹಿನ್ನೆಯಲ್ಲಿ ಕೊಡಗು ಜಿಲ್ಲೆಗೆ ಜ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಹೆಚ್ಚಿನ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಮನವಿ ಮಾಡಿದರು.
ಕೊಡ್ಲಿಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕೊಡ್ಲಿಪೇಟೆ, ಹಂಡ್ಲಿ, ಬ್ಯಾಡಗೊಟ್ಟ, ಬೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆ ಸಂದರ್ಭ ನೀಡಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸಿ ನುಡಿದಂತೆ ನಡೆದಿದ್ದಾರೆ. ಈ ಐದು ಗ್ಯಾರಂಟಿ ಯಶಸ್ವಿಯಾಗಿದ್ದು, ಪಕ್ಷ ಭೇದ, ಜಾತಿ,ಧರ್ಮ ಭೇದವಿಲ್ಲದೆ ಅರ್ಹ ಫಲಾನುಭವಿಗಳಿಗೆ ಸವಲತ್ತು ತಲುಪಿಸಲಾಗುತ್ತಿದೆ ಎಂದರು.
ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಯಾವುದೇ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆ ಇಲ್ಲ. ಗಡಿ ಭಾಗವಾದ ಕೊಡ್ಲಿಪೇಟೆಯಲ್ಲಿ ಹೆಚ್ಚಿನ ಜನರು ನಮಗೆ ಮತ ಹಾಕಿದ್ದಾರೆ. ಇದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರನ್ನು ಮನೆಗೆ ಕಳುಹಿಸಲು ಒಳ್ಳೆಯ ಅವಕಾಶ ಸಿಕ್ಕಿದೆ. ನಮ್ಮ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳು ಲಭಿಸುವಂತೆ ಶ್ರಮಿಸುವ ಮೂಲಕ ಪಕ್ಷದ ಗೆಲುವಿಗೆ ಕಾರ್ಯಕರ್ತರು ಕಾರಣೀಭೂತರಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಮೈಸೂರಿನ ಡಾ.ಶೂಶ್ರುತ್ ಗೌಡ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿದರು. ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರು, ಅಭಿಮಾನಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಿತಿಗಳನ್ನು ರಚಿಸಲಾಯಿತು. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಗಳಾದ ಜನಾರ್ದನ್, ಚೇತನ್, ವಲಯಾಧ್ಯಕ್ಷರಾದ ಔರಂಗಜೇಬ್, ಮಲ್ಲೇಶ್ ಬೆಸೂರು, ಸುಲ್ಯೆಮಾನ್ ಬ್ಯಾಡಗೊಟ್ಟ, ಬ್ಯಾಡಗೊಟ್ಟ ಗ್ರಾಪಂ ಅಧ್ಯಕ್ಷ ಹನೀಫ್, ಮುಖಂಡರಾದ ಪ್ರಸನ್ನ, ಜೆ.ಕೆ.ತೇಜ್‌ಕುಮಾರ್, ಚೇತನ್, ಪಾವನ, ವೇದ್‌ಕುಮಾರ್, ಶೋಭಿತ್‌ಗೌಡ, ವಹಾಬ್, ಧರ್ಮಣ್ಣ ಬೆಸೂರು, ಜಯಪ್ಪ ಕೆರಗನಹಳ್ಳಿ ಇದ್ದರು.