

ಮೈಸೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ಪರಿಶೀಲನೆ ಮಾಡಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಹಾಗೂ ನೂತನ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶೇ. 70 ರಷ್ಟು ಮೇಲ್ವರ್ಗದವರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ದೊಡ್ಡ ಕಾರು ಹೊಂದಿರುವವನು, 25 ಸಾವಿರ ರೂ.ಸಂಬಳ ಪಡೆಯುವ ವ್ಯಕ್ತಿಗೆ ಉಚಿತ ವಿದ್ಯುತ್ ನೀಡಿದರೆ ಹೇಗೆ ? ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ. ಅಂತವರಿಗೆ ಮಾತ್ರ ಗ್ಯಾರಂಟಿ ಸಿಗುವಂತೆ ಮಾಡಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ನನಗೆ ಸಿದ್ದರಾಮಯ್ಯನವರೇ ದೇವರು. ಸಿದ್ದರಾಮಯ್ಯನವರು ನನಗೆ ಟಿಕೆಟ್ ಕೊಟ್ಟರು. ಅದಕ್ಕೆ ಡಿ.ಕೆ.ಶಿವಕುಮಾರ್ ಕೂಡ ಸಹಕಾರ ನೀಡಿದರು. ಎಂಟು ಕ್ಷೇತ್ರದ ಶಾಸಕರು, ಮಾಜಿ ಶಾಸಕರು ನನಗೆ ಸಹಕಾರ ನೀಡಿದ್ದಾರೆ. ನನಗೆ ಅದೃಷ್ಟ ಇರಲಿಲ್ಲ, ನನ್ನ ಹಣೆ ಬರಹ ಸರಿ ಇರಲಿಲ್ಲ, ಆಗಾಗಿ ನಾನು ಸೋತಿದ್ದು ಎಂದರು.