ದಸರಾ ವಸ್ತು ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ

77
Published on

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ 90 ದಿನಗಳ ಕಾಲ ಆಯೋಜಿಸಿರುವ ದಸರಾ ವಸ್ತು ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರಲ್ಲದೇ ವಸ್ತು ಪ್ರದರ್ಶನ ಆವರಣದಲ್ಲಿ ಪೂರ್ಣಗೊಂಡಿದ್ದ ನಾನಾ ಕಾಮಗಾರಿಗಳನ್ನು ಉದ್ಘಾಟಿಸಿದರು.

ಪ್ರವೇಶ ದ್ವಾರದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ರಾಜ್ ಕುಮಾರ್ ಪುತ್ಥಳಿ ಅನಾವರಣಗೊಳಿಸಿದರು. 10 ಕೋಟಿ ರೂ. ವೆಚ್ಚದಲ್ಲಿ ಬೇಲೂರು-ಹಳೆಬೀಡು ಶೈಲಿಯಲ್ಲಿ ನವೀಕರಣಗೊಳಿಸಲಾಗಿದ್ದ 153 ಶಾಶ್ವತ ಮಳಿಗೆಗಳಿರುವ ‘ಸಿದ್ದರಾಮಯ್ಯ ಅಂಕಣ’ ಹಾಗೂ 10 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಅಜೀಜ್ ಸೇಠ್ ಸಂಗೀತ ಕಾರಂಜಿ’ ಗೆ ಚಾಲನೆ ನೀಡಿದರು.

ಬ್ಯಾಟರಿ ಚಾಲಿತ ವಾಹನದಲ್ಲಿ ಸಚಿವರು, ಇನ್ನಿತರೆ ಜನಪ್ರತಿನಿಧಿಗಳೊಂದಿಗೆ ಸುತ್ತು ಹಾಕಿದ ಸಿದ್ದರಾಮಯ್ಯ, ಸೌಲಭ್ಯ, ಮಳಿಗೆಗಳ ರಚನೆಯನ್ನು ವೀಕ್ಷಿಸಿದರು.

ಪ್ರವಾಸಿಗರಿಗೆ ವಸ್ತು ಪ್ರದರ್ಶನ ತೆರೆದಿದ್ದು, ಬಟ್ಟೆಗಳ ಮಳಿಗೆ, ತಿಂಡಿ ತಿನಿಸುಗಳ ಮಳಿಗೆ, ಮಕ್ಕಳಿಗೆ ಆಟದ ವ್ಯವಸ್ಥೆ, ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ವೈವಿಧ್ಯತೆಯಿಂದ ಕೂಡಲಿದೆ. ಉದ್ಘಾಟನೆಗೊಂಡ ಮೊದಲ ದಿನವೇ ಸಾವಿರಾರು ಮಂದಿ ವಸ್ತು ಪ್ರದರ್ಶನ ಕಣ್ತುಂಬಿಕೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐಎನ್‌ಎಸ್ ಕದಂಬ ಸೇನಾ ಸಿಬ್ಬಂದಿ ಬ್ಯಾಂಡ್ ಸೆಟ್ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಡಿ ರವಿಶಂಕರ್, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಸಿಇಒ ರುದ್ರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net