ಹೆಚ್ಚಿನ ಮಳೆ ಮುನ್ನೆಚ್ಚರ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

27adarshkdga2
Published on

ಮಡಿಕೇರಿ: ಹವಾಮಾನ ಇಲಾಖೆಯಿಂದ ಪ್ರತಿನಿತ್ಯದ ಮಳೆ ಪ್ರಮಾಣದ ಬಗ್ಗೆ ಮಾಹಿತಿ ಲಭ್ಯವಾಗಲಿದ್ದು, ಮಾಹಿತಿ ಆಧಾರಿಸಿ ಜಿಲ್ಲಾಧಿಕಾರಿಗಳು ಹೆಚ್ಚಿನ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು.


ರಾಜ್ಯದ ಹವಮಾನ, ಮಳೆ-ಬೆಳೆ ಸಂಬಂಧಿತ ಸ್ಥಿತಿಗತಿಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜತೆ ಬುಧವಾರ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಮಾತನಾಡಿದರು.


ವ್ಯಾಪಕ ಮಳೆಯಿಂದ ಉಂಟಾಗಬಹುದಾದ ಅನಾಹುತ ತಡೆಯಲು ಜಿಲ್ಲಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು ಎಂದು ನಿರ್ದೇಶನ ನೀಡಿದರು.


ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಸಂಬಂಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಗಳ ದೂರವಾಣಿ ಸಂಖ್ಯೆ ಜನರಿಗೆ ದೊರೆಯುವಂತಿರಬೇಕು ಎಂದು ಸೂಚಿಸಿದರು.


ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.


ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಈ ಸಾಲಿನಲ್ಲಿ ೬೯ ಮನೆಹಾನಿ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ೨ (ಎ ವರ್ಗ) ಮನೆಹಾನಿ (ಪೂರ್ಣ ಹಾನಿ), ೬ ತೀವ್ರ ಹಾನಿ(ಬಿ ವರ್ಗ) ಹಾಗೂ ೬೧ ಭಾಗಶಃ ಹಾನಿ (ಸಿ ವರ್ಗ) ಪ್ರಕರಣಗಳು ಕಂಡುಬಂದಿದೆ. ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ೧ ಮಾನವ ಪ್ರಾಣ ಹಾನಿ ಪ್ರಕರಣ ವರದಿಯಾಗಿದೆ. ಉಳಿದಂತೆ ೯ ಜಾನುವಾರು ಹಾನಿ, ೭ ಜಾನುವಾರು ಕೊಟ್ಟಿಗೆ ಹಾನಿ ಪ್ರಕರಣ ವರದಿಯಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯನುಸಾರ ಪರಿಹಾರ ಪಾವತಿಸಲಾಗಿದೆ ಎಂದು ಹೇಳಿದರು.


೧೪೯೬ ವಿದ್ಯುತ್ ಕಂಬಗಳು, ೦.೫ ಕಿ.ಮೀ ವಿದ್ಯುತ್ ತಂತಿ ಹಾನಿ, ೭೨ ಟ್ರಾನ್ಸ್ ಫಾರ್ಮರ್ ಹಾನಿ, ೬ ಅಂಗನವಾಡಿ ಕಟ್ಟಡ ಹಾನಿ, ೧ ಶಾಲಾ ಕಟ್ಟಡ ಹಾನಿ ಹಾಗೂ ೧ ಸೇತುವೆ ಹಾನಿ ವರದಿಯಾಗಿದೆ. ಕಂದಾಯ, ಪೊಲೀಸ್, ಅರಣ್ಯ, ಪಂಚಾಯತ್ ರಾಜ್, ಅಗ್ನಿಶಾಮಕ ಹಾಗೂ ವಿವಿಧ ಇಲಾಖೆಗಳ ತೆಗೆ ಎನ್‌ಡಿಆರ್‌ಎಫ್ ತಂಡಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.


ಶಾಸಕ ಡಾ.ಮಂತರ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬನಾ ಎಂ.ಶೇಖ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ನಾಯಕ್, ಹಾರಂಗಿ ಜಲಾಶಯ ಎಂಜಿನಿಯರ್ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ದೇಗೌಡ, ಸೆಸ್ಕ್ ಎಂಜಿನಿಯರ್ ಅನಿತಾ ಬಾಯಿ, ಗ್ರಾಮೀಣ ಅಭಿವೃದ್ಧಿ ವಿಭಾಗದ ಎಂಜಿನಿಯರ್ ಸುರೇಶ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net