

ಮೈಸೂರು: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್‌ಸೇಠ್ ಹೇಳಿದರು.
ಕ್ಷೇತ್ರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಜನರ ಆಶೀರ್ವಾದದಿಂದ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಚರ್ಚೆ ನಡೆದಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ದ್ವೇಷ ರಾಜಕಾರಣ ಆರಂಭಿಸಿದ್ದಾರೆ. ಮುಡಾ ಅಕ್ರಮದಲ್ಲಿ ಸಿಎಂ ಹಸ್ತಕ್ಷೇಪದ ಬಗ್ಗೆ ಒಂದೂ ದಾಖಲೆ ಇಲ್ಲ. ಹೀಗಿದ್ದರೂ ಬಿಜೆಪಿ ಜೆಡಿಎಸ್ ನಾಯಕರು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಮಾಡುತ್ತಿದ್ದಾರೆ. ಕಾನೂನಿನ ಮೂಲಕ ನಮಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಾಲ ಕಾಲಕ್ಕೆ ಆಗುವುದು ಸರ್ವೇ ಸಾಮಾನ್ಯ. ಡಿ.ಕೆ.ಶಿವಕುಮಾರ್‌ಗಿಂತ ಸಮರ್ಥ ನಾಯಕನ ಹುಡುಕಾಟದಲ್ಲಿ ಪಕ್ಷ ಇದೆ. ಪಕ್ಷ ಕಷ್ಟದಲ್ಲಿದ್ದ ವೇಳೆ ಅವರು ಅಧಿಕಾರ ಸ್ವೀಕರಿಸಿ ಮೂರು ವರ್ಷ ಯಶಸ್ವಿಯಾಗಿ ಅಧಿಕಾರ ನಡೆಸಿದ್ದಾರೆ. ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಒಬ್ಬರು ಒಂದು ಹುದ್ದೆಯಲ್ಲಿ ಇರಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಸಾಕಷ್ಟು ಒತ್ತಡ ಅವರಿಗೂ ಕೂಡ ಇರುತ್ತದೆ. ಹಾಗಾಗಿ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಸಮರ್ಥ ವ್ಯಕ್ತಿ ಸಿಕ್ಕಾಗ ಯಾವಾಗ ಬೇಕಾದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗಲಿದೆ ಎಂದರು.
ರಾಜ್ಯ ಹಣಕಾಸು ಯೋಜನೆಯಡಿ 15 ಕೋಟಿ ರೂ. ಅನುದಾನದ ಕಾಮಗಾರಿಗೆ ಚಾಲನೆ ಕೊಟ್ಟಿದ್ದೇನೆ. ಕಳೆದ ವಾರ 5 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿದ್ದೆ. ಈಗ ಮತ್ತೆ 5 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಕಡೆ ಗಮನ ಕೊಟ್ಟಿದ್ದೇನೆ ಎಂದರು.