ಜು.11ರಿಂದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಸಾರ್ವಜನಿಕ ಕುಂದು-ಕೊರತೆ ಆಲಿಸಿ ಪರಿಹಾರ ನೀಡುವ ಜತೆಗೆ ವಲಯ ಮಟ್ಟದಲ್ಲಿ ಅಭಿವೃದ್ಧಿ ಕೆಲಸವನ್ನು ಪರಿಶೀಲನೆ ನಡೆಸುವ ಸಂಬಂಧ ಪಾಲಿಕೆಯ ಚೀಫ್​​​ ಕಮಿಷನರ್ ಎಂ.ಮಹೇಶ್ವರ್ ರಾವ್ ಅವರು ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.

ನಿಕಟಪೂರ್ವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕಮಿಷನರ್ ಆಗಿದ್ದ ವೇಳೆ ಹಿಂದಿನ ವರ್ಷ ಇದೇ ರೀತಿಯ ಕಾರ್ಯಕ್ರಮ ರೂಪಿಸಿ ಜನರ ಅಹವಾಲು ಸ್ವೀಕಾರಕ್ಕೆ ವೇದಿಕೆ ಕಲ್ಪಿಸಿದ್ದರು. ಇದರಿಂದ ಸ್ಥಳೀಯ ಸಮಸ್ಯೆಗಳಿಗೆ ಆಯಾ ವಲಯದ ಜಂಟಿ ಆಯುಕ್ತರ ಸಮ್ಮುಖ ಪರಿಹಾರ ಒದಗಿಸಲು ಸಾಧ್ಯವಾಗಿತ್ತು. ಜತೆಗೆ ಸ್ಥಗಿತಗೊಂಡ ಕಾಮಗಾರಿಗಳನ್ನು ಪಟ್ಟಿ ಮಾಡಿ ಮರುಚಾಲನೆ ನೀಡಲು ಅವಕಾಶವಾಗಿತ್ತು. ತುಷಾರ್ ಗಿರಿನಾಥ್ ಅವರು ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಹುದ್ದೆಗೆ ವರ್ಗವಾದ ಬಳಿಕ ಪಾಲಿಕೆಯ ಮುಖ್ಯ ಆಯುಕ್ತರಾಗಿರುವ ಮಹೇಶ್ವರ್ ರಾವ್ ಕೂಡ ಜನರ ಸಮಸ್ಯೆ ಆಲಿಕೆಗೆ ಸಮಯ ನೀಡಲು ಈ ಹೊಸ ವ್ಯವಸ್ಥೆಗೆ ನಾಂಡಿ ಹಾಡಿದ್ದಾರೆ.

ಯಲಹಂಕ ವಲಯದಿಂದ ಆರಂಭ:

ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ ಆಯಾ ವಲಯ ಕಚೇರಿಯಲ್ಲಿ ನಡೆಯಲಿದೆ. ತಿಂಗಳ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮ.11ರಿಂದ 1ರ ವರೆಗೆ ನಾಗರಿಕರ ಕುಂದು-ಕೊರತೆ ಆಲಿಸಲಾಗುತ್ತದೆ. ಸ್ಥಳೀಯ ಸಾರ್ವಜನಿಕರು ಖುದ್ದಾಗಿ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ಅಹವಾಲು ಮುನ್ನ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ವಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದ ವೇಳಾಪಟ್ಟಿ ವಿವರ:

ವಾರದ ದಿನ ವಲಯ

1ನೇ ಮಂಗಳವಾರ ಪೂರ್ವ

1ನೇ ಶುಕ್ರವಾರ ಪಶ್ಚಿಮ

2ನೇ ಮಂಗಳವಾರ ಮಹದೇವಪುರ

2ನೇ ಶುಕ್ರವಾರ ಯಲಹಂಕ

3ನೇ ಮಂಗಳವಾರ ದಾಸರಹಳ್ಳಿ

3ನೇ ಶುಕ್ರವಾರ ರಾಜರಾಜೇಶ್ವರಿನಗರ

4ನೇ ಮಂಗಳವಾರ ಬೊಮ್ಮನಹಳ್ಳಿ

4ನೇ ಶುಕ್ರವಾರ ದಕ್ಷಿಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net