ಡೆಂಘೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರ ಸೂಚನೆ

denge meeting
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯಾ ವಲಯಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್​​ನಲ್ಲಿ ಮಂಗಳವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಪ್ರತಿನಿತ್ಯ ಸರಾಸರಿ 150ರಿಂದ 160 ಡೆಂಘೆ ಪ್ರಕರಣಗಳು ಕಂಡುಬರುತ್ತಿವೆ. ಜು.1ರಿಂದ ನಿನ್ನೆಯವರೆಗೆ 3,304 ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ ಎಲ್ಲ ವಲಯಗಳಲ್ಲಿ ಡೆಂಘೆ ನಿಯಂತ್ರಣಕ್ಕಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು.

ವಲಯ ಆಯುಕ್ತರು ಡೆಂಘೆ ನಿಯಂತ್ರಿಸುವ ಸಂಬಂಧ ಆರೋಗ್ಯ ವಿಭಾಗದ ಅಧಿಕಾರಿಗಳೊಂದಿಗೆ ಪ್ರತಿನಿತ್ಯ ಸಭೆ ನಡೆಸಿ ಮೇಲ್ವಿಚಾರಣೆ ಮಾಡಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಡೆಂಘೆ ಪ್ರಕರಣಗಳು ಕಂಡುಬರುವ ಹಾಟ್‌ಸ್ಪಾಟ್ ಸ್ಥಳಗಳಲ್ಲಿ ನಾಗರಿಕರಿಗೆ ಸೊಳ್ಳೆ ಕಚ್ಚದಂತೆ ಡೀಟ್ ಕ್ರೀಮ್ ಹಾಗೂ ನೀಮ್ ಆಯಿಲ್ ವಿತರಿಸಬೇಕು. ಜತೆಗೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಹೆಚ್ಚಾಗಿ ಫಾಂಗಿಂಗ್ ಹಾಗೂ ಔಷಧಿ ಸಿಂಪಡಣೆ ಮಾಡಬೇಕೆಂದು ನಿರ್ದೇಶಿಸಿದರು.

ರಸ್ತೆಗುಂಡಿ ತಕ್ಷಣ ಮುಚ್ಚಲು ಕ್ರಮವಹಿಸಿ:

ನಗರದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬಿದ್ದಿರುವ ರಸ್ತೆಗುಂಡಿಗಳನ್ನು ಕೂಡಲೆ ಮುಚ್ಚಲು ಕ್ರಮ ಕೈಗೊಳ್ಳಬೇಕು. ಜತೆಗೆ ಪರಿಣಾಮಕಾರಿಯಾಗಿ ರಸ್ತೆಗುಂಡಿಗಳನ್ನು ಮುಚ್ಚುವ ಸಲುವಾಗಿ ಅಭಿವೃದ್ಧಿಪಡಿಸುತ್ತಿರುವ ತಂತ್ರಾಂಶವನ್ನು ಸಿದ್ದಪಡಿಸಲಾಗುತ್ತಿದ್ದು, ಅದನ್ನು ಅನಾವರಣಗೊಳಿಸಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಡಾ. ಆರ್.ಎಲ್ ದೀಪಕ್, ಸ್ನೇಹಲ್, ಕರೀಗೌಡ, ಪ್ರೀತಿ ಗೆಹ್ಲೋಟ್, ಶಿವಾನಂದ್ ಕಪಾಶಿ, ರಮೇಶ್, ರಮ್ಯಾ, ಪ್ರಧಾನ ಅಭಿಯಂತರ ಡಾ. ಪ್ರಹ್ಲಾದ್, ಎಲ್ಲ ವಲಯಗಳ ಮುಖ್ಯ ಅಭಿಯಂತರರು ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಆಸ್ತಿತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಿ:

ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿತೆರಿಗೆ ಸಂಗ್ರಹದ ವಿಚಾರದಲ್ಲಿ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಪರಿಣಾಮಕಾರಿಯಾಗಿ ಕಾರ್ಯರ್ನಿಹಿಸಿ ಹೆಚ್ಚು ಆಸ್ತಿತೆರಿಗೆಯನ್ನು ಸಂಗ್ರಹಿಸಬೇಕು. ಒಂದು ಬಾರಿ ತೀರುವಳಿ ಯೋಜನೆಯಡಿ ಬರುವ ಬಾಕಿ ಆಸ್ತಿ ಸುಸ್ತಿದಾರರಿಗೆ ಕೂಡಲೇ ತೆರಿಗೆ ಪಾವತಿಸಲು ಸೂಚಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಆಸ್ತಿತೆರಿಗೆಯನ್ನು ಪಾವತಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net