

ತುಮಕೂರು: ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರ ಜೆಡಿಎಸ್ ತೆಕ್ಕೆಯಿಂದ ಮತ್ತೆ ಬಿಜೆಪಿ ಪಾಳಯಕ್ಕೆ ಜಾರಿದ್ದು ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ತನ್ನ ಬಲ ವೃದ್ಧಿಸಿಕೊಂಡಿದೆ.
ಎಸ್.ಮಲ್ಲಿಕಾರ್ಜುನಯ್ಯ ಅವರ ನಂತರ ಜಿಲ್ಲೆಯ ಯಾರೊಬ್ಬರು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ, ಈ ಬಾರಿ ಎಂ.ಚಿದಾನಂದಗೌಡ ಆಯ್ಕೆಯಾಗುವ ಮೂಲಕ ಕಮಲ ಅರಳಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅನುಪಸ್ಥಿತಿಯಲ್ಲಿಯೂ ಬಿಜೆಪಿಗೆ ಜಿಲ್ಲೆಯಲ್ಲಿ ಭರ್ಜರಿ ಬೆಂಬಲ ವ್ಯಕ್ತವಾಗಿದೆ.
ಎಲ್ಲ ಚುನಾವಣೆಗಳಲ್ಲಿಯೂ ಜನಾಭಿಪ್ರಾಯ ರೂಪಿಸುವ ಸಾಮರ್ಥ್ಯ ಇರುವ ಪದವೀಧರರ ಶಕ್ತಿಯ ಅರಿವಿದ್ದ ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಹಾಗೂ ಎಬಿವಿಪಿ ಹಿನ್ನೆಲೆಯಲ್ಲಿ ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್ ಜತೆಯಾಗಿ ನಗರದಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು ಬಿಜೆಪಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದೆ.
ತುಮಕೂರು ನಗರದ ಶಾಸಕರನ್ನು ಹೊರತುಪಡಿಸಿದರೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಈ ಚುನಾವಣೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸಿರಲಿಲ್ಲ, ಸ್ಥಳೀಯ ರಾಜಕೀಯ ಕಾರಣಕ್ಕೆ ಯಾರೂ ಮನಸಾರೆ ಬೆಂಬಲಿಸದೇ ನಾಮ್‌ಕೆವಾಸ್ತೆಗೆ ಪಕ್ಷದ ಪ್ರಚಾರ ಸಭೆಯಲ್ಲಿಯಷ್ಟೇ ಕಾಣಿಸಿಕೊಂಡ ಸಾಕಷ್ಟು ಚುನಾಯಿತ ಪ್ರತಿನಿಧಿಗಳಿಗೂ ಈ ಫಲಿತಾಂಶ ಶಾಕ್ ನೀಡಿದೆ.
ಹಾಲಿ ಸದಸ್ಯರಿದ್ದರೂ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾ ಗಿರುವುದು ಜಿಲ್ಲಾ ಜೆಡಿಎಸ್‌ನಲ್ಲಿ ಯಾವುದೂ ಸರಿ ಇಲ್ಲ ಎಂಬು ದನ್ನು ಮತ್ತೆ ಬಹಿರಂಗಗೊಂಡಿದೆ. ಜಿಲ್ಲೆಯ ಜೆಡಿಎಸ್ ಮುಖಂಡರು ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಪರವಾಗಿ ತಮ್ಮ ಬೆಂಬಲಿಗರ ಮೂಲಕ ಚುನಾವಣೆ ನಡೆಸಿರುವುದು ತೂಪಲ್ಲಿ ಚೌಡಾರೆಡ್ಡಿ ಹಿನ್ನಡೆಗೆ ಕಾರಣವಾಗಿದೆ.
ಜೆಡಿಎಸ್‌ನಲ್ಲಿದ್ದ ರಮೇಶ್‌ಬಾಬು ಪಕ್ಷಕ್ಕೆ ಸೇರ್ಪಡೆಯಾಗಿ ಅಭ್ಯರ್ಥಿಯಾಗಿದ್ದು ಕಾಂಗ್ರೆಸ್ ಪಕ್ಷಕ್ಕಂತೂ ಮರ್ಯಾದೆ ಉಳಿಸಿದೆ, ಈ ಹಿಂದಿನ ಚುನಾವಣೆಗಳಲ್ಲಿ ಮೂರಂಕಿ ದಾಟಲು ಪರದಾಡುತ್ತಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೌರವಯುತ ಮತ ಪಡೆದಿರುವುದು ಭವಿಷ್ಯದ ಹೋರಾಟಕ್ಕೆ ಪ್ರೇರಣೆಯಾಗಲೂಬಹುದು. ಪಕ್ಷೇತರರಾಗಿ ಸ್ಫರ್ಧಿಸಿದ್ದ ತುರುವೇಕೆರೆ ಮೂಲದ ಕೆ.ಎಂ.ಸುರೇಶ್ ಕೂಡ ತಮ್ಮ ಸ್ವಂತ ಸಾಮರ್ಥ್ಯ ಹಾಗೂ ಸಂಪರ್ಕದಿಂದ ಒಳ್ಳೆಯ ಮತ ಪಡೆದಿರುವುದು ಕುತೂಹಲ ಹಾಗೂ ಚುನಾವಣೆಗಳ ಮೇಲೆ ಭರವಸೆೆಯನ್ನು ಉಳಿಸಿದೆ, ಬಂಡಾಯ ಅಭ್ಯರ್ಥಿಯಾಗಿದ್ದ ಹಾಲನೂರು ಲೇಪಾಕ್ಷಿ ಅವರನ್ನು ಮತದಾರ ಗಂಭೀರವಾಗಿ ತೆಗೆದುಕೊಂಡಿಲ್ಲ.
ತುಮಕೂರು, ಕೊರಟಗೆರೆಯಲ್ಲಿ ಬಲ: ತುಮಕೂರು ನಗರ ಹಾಗೂ ಕೊರಟಗೆರೆ ತಾಲೂಕಿನಲ್ಲಿ ಬಿಜೆಪಿಗೆ ಹೆಚ್ಚು ಬೆಂಬಲ ವ್ಯಕ್ತವಾಗಿದೆ, ಗುಬ್ಬಿ, ಶಿರಾ, ಮಧುಗಿರಿ ತಾಲೂಕಿನಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು, ಪಾವಗಡ ತಾಲೂಕುಗಳಲ್ಲಿ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಹೆಚ್ಚು ಬೆಂಬಲ ವ್ಯಕ್ತವಾಗಿರುವುದು ಆಶ್ಚರ್ಯ ಮೂಡಿಸಿದೆ. ಜೆಡಿಎಸ್ ಅಭ್ಯರ್ಥಿ ತೂಪಲ್ಲಿ ಚೌಡಾರೆಡ್ಡಿ ಅವರನ್ನು ಜಿಲ್ಲೆಯ ಪದವೀಧರ ಮತದಾರ ಸಂಪೂರ್ಣವಾಗಿ ಕೈಬಿಟ್ಟಿರುವುದು ಮತ ಎಣಿಕೆ ಸಂದರ್ಭದಲ್ಲಿ ಸ್ಪಷ್ಟವಾಗಿದೆ.
ಬಿಎಸ್‌ವೈ ಪ್ರಚಾರ ಪ್ಲ್ಲಸ್‌ಪಾಯಿಂಟ್: ಸಿಎಂ ಬಿ.ಎಸ್.ಯಡಿಯೂರಪ್ಪ ತುಮಕೂರು ನಗರಕ್ಕೆ ಆಗಮಿಸಿ ಎಂ.ಚಿದಾನಂದಗೌಡ ಪರ ಪ್ರಚಾರಸಭೆ ನಡೆಸಿದ್ದು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತಬರಲು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅನಾರೋಗ್ಯ ಕಾರಣಕ್ಕೆ ಪ್ರಚಾರದಿಂದ ದೂರ ಉಳಿದಿದ್ದು ಮತ್ತಿತರರ ಕಾರಣದಿಂದ ಲಿಂಗಾಯತ ಮತಗಳು ಚದುರುವ ಮುನ್ಸೂಚನೆ ಅರಿತು ಬಿಎಸ್‌ವೈ ತುಮಕೂರಿನಲ್ಲಿ ಪ್ರಚಾರ ಸಭೆ ನಡೆಸಿ, ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮುಖಂಡರಿಗೆ ಸೂಚನೆ ನೀಡಿದ್ದು ಫಲನೀಡಿದೆ.