ಕಠಿಣ ಶ್ರಮ ಮತ್ತು ಗುರಿಯಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ಹಂಪನಾ

Sudhee_15_Chidananda_Murthy_Award_@_Govt_Arts_College (3)
Published on

ಬೆಂಗಳೂರು: ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ತಾಳ್ಮೆ ಅತೀ ಮುಖ್ಯವಾಗಿದ್ದು, ಕಠಿಣ ಶ್ರಮ ಮತ್ತು ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಹೇಳಿದರು.

ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಮತ್ತು ಸರ್ಕಾರಿ ಕಲಾ ಕಾಲೇಜು ಸಹಯೋಗದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎನ್.ಎಸ್. ತಾರಾನಾಥ್ ಅವರಿಗೆ 2024ನೇ ಸಾಲಿನ ‘ಚಿದಾನಂದ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.

ಓದು ಹಾಗೂ ಕಲಿಕೆಗೆ ಮುಕ್ತಾಯ ಎನ್ನುವುದಿಲ್ಲ. ಈಗ ಪ್ರಾರಂಭ ಎಂದುಕೊಂಡು ಹೆಜ್ಜೆ ಇಡಬೇಕು. ಪದವಿ, ಸ್ನಾತಕೋತ್ತರ ಪದವಿಯ ಅವಧಿಯಲ್ಲಿ ಕಷ್ಟಪಟ್ಟು ಓದಿದರೆ ಮುಂದಿನ 40 ವರ್ಷಗಳು ಬದುಕನ್ನು ಕಟ್ಟಿಕೊಳ್ಳಬಹುದು. ಈ ಅವಧಿಯಲ್ಲಿ ಮನಸ್ಸು ಬೇರೆಡೆಗೆ ಹರಿದಾಡಿದಲ್ಲಿ ಜೀವನ ಪೂರ್ತಿ ಕಷ್ಟ ಪಡಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ವ್ಯಾಕರಣ, ಛಂದಸ್ಸು, ಶಾಸನಶಾಸ್ತ್ರ ಹಾಗೂ ತೌಲನಿಕ ಅಧ್ಯಯನ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ತಾರಾನಾಥ್, ಓದುಗರಿಗೆ ಬೇಕಾದ ಸಿದ್ಧತೆಯ ಪಾಠಗಳನ್ನು ಮಾಡಿದರು. ಹೊಸ ತಲೆಮಾರಿಗೆ ಬೇಕಾದ ವಾತಾವರಣ ನಿರ್ಮಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದವರಲ್ಲಿ ಇವರೂ ಒಬ್ಬರು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಎಚ್. ಶಶಿಕಲಾ, ಕನ್ನಡ ಭಾಷೆಯು ಬೇರೆ ಬೇರೆ ಭಾಷೆಗಳಿಂದ ಪುಷ್ಠಿ ಪಡೆದಿದೆ. ಆದ್ದರಿಂದ ಇತರೆ ಭಾಷೆಗಳ ನೆರವು ಪಡೆದು, ಜ್ಞಾನದ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆ ಬದಲಾಗುತ್ತಿದೆ. ಕಿರುತೆರೆ, ಹಿರಿತೆರೆಗಳಲ್ಲಿ ಭಾಷೆ ಸರಳವಾಗುತ್ತಿದೆ. ಭಾಷೆ ಬದಲಾವಣೆಯ ಅಗತ್ಯಗಳನ್ನು ಗುರುತಿಸಬೇಕು. ಸಂಶೋಧನೆಗಳು ಕಲ್ಪನೆಗಳಿಂದ ಕೂಡಿರದೆ, ವಾಸ್ತವದ ನೆಲೆಗಟ್ಟಿನಿಂದ ಕೂಡಿರಬೇಕು ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಎನ್.ಎಸ್. ತಾರಾನಾಥ್ ಮಾತನಾಡಿ, ಸಂಶೋಧಕ ಚಿದಾನಂದ ಮೂರ್ತಿ ಅವರು ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡುತ್ತಿದ್ದರು. ಕನ್ನಡದ ಜತೆಗೆ ಸಂಸ್ಕೃತ ಹಾಗೂ ಸಂಸ್ಕೃತಿಯ ಶೋಧಕರಾಗಿ ಗುರುತಿಸಿಕೊಂಡರು. ಅವರ ಸಂಶೋಧನೆಗೆ ಅನೇಕ ಆಯಾಮಗಳಿದ್ದವು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net